ಕೃಷಿ, ಪೊಲೀಸ್ ಅಧಿಕಾರಿಗಳ ತಂಡದಿಂದ ಗೊಬ್ಬರ ದಾಸ್ತಾನು ಪರಿಶೀಲನೆ: ಯೂರಿಯಾ ಅಕ್ರಮ ಮಾರಾಟ ಕಂಡರೆ ಕ್ರಮದ ಎಚ್ಚರಿಕೆ

Pratibha Boi
ಕೃಷಿ, ಪೊಲೀಸ್ ಅಧಿಕಾರಿಗಳ ತಂಡದಿಂದ ಗೊಬ್ಬರ ದಾಸ್ತಾನು ಪರಿಶೀಲನೆ: ಯೂರಿಯಾ ಅಕ್ರಮ ಮಾರಾಟ ಕಂಡರೆ ಕ್ರಮದ ಎಚ್ಚರಿಕೆ
WhatsApp Group Join Now
Telegram Group Join Now
ಮುದ್ದೇಬಿಹಾಳ: ಜಿಲ್ಲಾಧಿಕಾರಿ ಮತ್ತು ಜಂಟಿ ಕೃಷಿ ನಿರ್ದೇಶಕರ ಸೂಚನೆ ಮೇರೆಗೆ ಕೃಷಿ ಮತ್ತು ಪೊಲೀಸ್ ಅಧಿಕಾರಿಗಳ ತಂಡ ಶನಿವಾರ ಪಟ್ಟಣದ ವಿವಿಧ ಗೊಬ್ಬರ ಮತ್ತು ಕೀಟನಾಶಕ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಯೂರಿಯಾ ಸೇರಿ ಇತರೆ ಗೊಬ್ಬರ ಸಂಗ್ರಹದ ತಪಾಸಣೆ ನಡೆಸಿ ದಾಖಲೆಗಳನ್ನು ಪರಿಶೀಲಿಸಿತು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಸಹಾಯಕ ನಿರ್ದೇಶಕ ಸುರೇಶ ಭಾವಿಕಟ್ಟಿ ಅವರು, ತಾಲೂಕಿನಲ್ಲಿ ಎಲ್ಲಿಯೂ ಯೂರಿಯಾ ಗೊಬ್ಬರ ಅಕ್ರಮವಾಗಿ ದಾಸ್ತಾನು ಮಾಡಿರುವ ಅಥವಾ ಮಾರಾಟ ಮಾಡುತ್ತಿರುವ ಪ್ರಕರಣಗಳು ಕಂಡು ಬಂದಿಲ್ಲ. ಪ್ರತಿಯೊಬ್ಬ ರೈತನಿಗೆ ಎರಡು ಪಾಕಿಟ್ ಯೂರಿಯಾ ಮಾತ್ರ ಕೊಡುವಂತೆ ನಿರ್ದೇಶನ ನೀಡಲಾಗಿದೆ. ಯೂರಿಯಾ ಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ, ಅಕ್ರಮವಾಗಿ ಸಂಗ್ರಹದಲ್ಲಿರಿಸಿಕೊಂಡರೆ ಅಥವಾ ಕಾಳಸಂತೆಯಲ್ಲಿ ಮಾರಾಟ ಮಾಡುವುದು ಪತ್ತೇ ಆದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಕೊಳ್ಳುವುದರ ಜೊತೆಗೆ ಅವರ ಲೈಸೆನ್ಸ್ ಕೂಡ ರದ್ದುಪಡಿಸಲು ಅವಕಾಶವಿದೆ ಎಂದು ತಿಳಿಸಿದರು.
ನಮ್ಮ ತಾಲೂಕಿನಲ್ಲಿಯೂ ಯೂರಿಯಾ ಗೊಬ್ಬರದ ಕೊರತೆ ಇದೆ. ದಾಸ್ತಾನು ಬಂದ ಹಾಗೆ ಅದನ್ನು ರೈತರಿಗೆ ವಿತರಿಸಲಾಗುತ್ತಿದೆ. ರೈತರಿಗೆ ಯೂರಿಯಾ ಗೊಬ್ಬರಕ್ಕೆ ಪರ್ಯಾಯವಾಗಿ ನ್ಯಾನೋ ಯೂರಿಯಾ ಬಳಸುವಂತೆ ಸೂಚಿಸಲಾಗುತ್ತಿದೆ. ಹಲವು ರೈತರು ಕಾಂಪೋಸ್ಟ್ ಗೊಬ್ಬರ ಬಳಸಲು ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು ಆದಷ್ಟು ಯೂರಿಯಾ ಗೊಬ್ಬರ ಬಳಕೆ ಕಡಿಮೆ ಮಾಡುವಂತೆ ಸಲಹೆ ನೀಡಲಾಗುತ್ತಿದೆ. ರೈತರಲ್ಲಿ ಇನ್ನೂ ನ್ಯಾನೋ ಯೂರಿಯಾ ಬಳಕೆ ಬಗ್ಗೆ ಅಷ್ಟೊಂದು ಸರಿಯಾದ ಮಾಹಿತಿ ಇಲ್ಲದಿರುವ ಕಾರಣ ಪ್ರತಿಯೊಂದು ಕೃಷಿ ಕೇಂದ್ರಗಳ ಮೂಲಕ ಈ ಕುರಿತು ಜಾಗೃತಿ ಮೂಡಿಸಲು ನಮ್ಮ ಕೃಷಿ ಅಧಿಕಾರಿಗಳು ಕ್ರಮ ಕೈಕೊಂಡಿದ್ದಾರೆ ಎಂದರು.
ಎನ್.ಕೆ.ಗುಡ್ನಾಳ, ಗೊಡಚಿ ವೀರಭದ್ರೇಶ್ವರ, ನಮ್ಮ ಗ್ರೋಮೋರ್ ಸೇರಿ ೫-೬ ಮಳಿಗೆ ಮತ್ತು ಗೋಡೌನ್‌ಗಳಿಗೆ ಭೇಟಿ ನೀಡಿ ದಾಸ್ತಾನು, ಪಾಶ್ ಮಷಿನ್, ವಾಸ್ತವ ದಾಸ್ತಾನು ಸಂಗ್ರಹ ತಾಳೆ ಹಾಕಿ ಎಲ್ಲವೂ ಸರಿ ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲಾಯಿತು.
ಸುರೇಶ ಭಾವಿಕಟ್ಟಿ, ಪಿಎಸೈ ಸಂಜಯ್ ತಿಪ್ಪಾರೆಡ್ಡಿ, ಕೃಷಿ ತಾಂತ್ರಿಕ ಅಧಿಕಾರಿಣಿ ರಾಜೇಶ್ವರಿ ನಾಡಗೌಡ, ಕೃಷಿ ಅಧಿಕಾರಿ ಸೋಮನಗೌಡ ಬಿರಾದಾರ, ಕೃಷಿ ಇಲಾಖೆ ಸಿಬ್ಬಂದಿ ತಂಡದಲ್ಲಿದ್ದರು.
WhatsApp Group Join Now
Telegram Group Join Now
Share This Article