ಬೆಳಗಾವಿ,ಏಪ್ರಿಲ್ 22: ಕೃಷ್ಣಾನದಿಗೆ ಮಹಾರಾಷ್ಟ್ರದಿಂದ ಎರಡು ಟಿಎಂಸಿ ನೀರು ಹಾಗೂ ಹಿಡಕಲ್ ಜಲಾಶಯದಿಂದ ಮೂರು ಹಳ್ಳಗಳ ಮೂಲಕ ಕೃಷ್ಣಾನದಿಗೆ 1 ಟಿಎಂಸಿ ನೀರು ಹರಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಸಚಿವ ಜಾರಕಿಹೊಳಿ ಹೇಳಿದರು.
ಯಮಕನಮರಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇರುವುದರಿಂದ ಹಾಗೂ ಮಳೆಯ ಕೊರತೆಯಿಂದಾಗಿ ಜನ- ಜಾನುವಾರುಗಳಿಗೆ ನೀರಿನ ಅಭಾವ ಉಂಟಾಗಿದ್ದರಿಂದ ನಮ್ಮ ಸರ್ಕಾರದ ವತಿಯಿಂದ ಮಹಾರಾಷ್ಟ್ರ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿತ್ತು. ಸದ್ಯ ನಮ್ಮ ಮನವಿ ಸ್ಪಂದಿಸಿ ಈಗ ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ 2 ಟಿಎಂಸಿ ನೀರು ಹರಿಸಲಾಗಿದೆ ಎಂದು ಹೇಳಿದರು.
ನಾವು ಕೂಡಾ ಹಿಡಕಲ್ ಜಲಾಶಯದಿಂದ ಮೂರು ಹಳ್ಳಗಳ ಮೂಲಕ ಕೃಷ್ಣಾನದಿಗೆ 1 ಟಿಎಂಸಿ ನೀರು ಹರಿಸಿ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದೇವೆ. ಈ ನೀರು ಬಿಡುವ ಪ್ರಯತ್ನನ ವರ್ಷಕ್ಕೊಮ್ಮೆ ನಿರಂತರ ನಡೆಯಲಿದೆ. ಆದ್ದರಿಂದ ಜಿಲ್ಲೆಯ ಭಾಗದ ರೈತರು ಹಾಗೂ ಸಾರ್ವಜನಿಕರು ನೀರನ್ನು ಪೋಲಾಗದಂತೆ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಕಳೆದ ಹಲವು ದಿನಗಳಿಂದ ಜನಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಹನಿ ನೀರಿಗೂ ಪರದಾಡುವಂತ ಸ್ಥಿತಿ ಎದುರಾಗಿತ್ತು. ಇಲ್ಲಿಯ ಸಮಸ್ಯೆ ಕುರಿತು ಎಲ್ಲ ಶಾಸಕರು ಹಾಗೂ ಸಚಿವರನ್ನು ಭೇಟಿ ಮಾಡಿ ಕೃಷ್ಣಾನದಿಗೆ ನೀರು ಹರಿಸುವಂತೆ ಮನವಿ ಮಾಡಿದರೂ ಯಾರು ನಮ್ಮ ಸಮಸ್ಯೆಗೆ ಸ್ಪಂದಿಸಿರಲಿಲ್ಲ.
ಆದರೆ ಇಲ್ಲಿರುವ ಸಮಸ್ಯೆಯನ್ನು ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಮಾಡಿಕೊಂಡಾಗ ಕೂಡಲೇ ಹೆಚ್ಚಿನ ಮುತವರ್ಜಿ ವಹಿಸಿ ಅವರು ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ 2 ಟಿಎಂಸಿ ನೀರು ಹಾಗೂ ಹಿಡಕಲ್ ಜಲಾಶಯದಿಂದ ಮೂರು ಹಳ್ಳಗಳ ಮೂಲಕ 1 ಟಿಎಂಸಿ ನೀರು ಕೃಷ್ಣಾನದಿಗೆ ಹರಿಸಲಾಗುತ್ತಿದೆ. ಈ ಕಾರ್ಯದಿಂದ ಎಲ್ಲ ರೈತರು ಸಂತಸಗೊಂಡಿದ್ದು, ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ ಎಲ್ಲ ರೈತರು ಧನ್ಯವಾದ ತಿಳಿಸಿದ್ದಾರೆ.