ಎಂ. ಕೆ. ಹುಬ್ಬಳ್ಳಿ,15: ಕಿತ್ತೂರು ತಾಲೂಕನ್ನು ಬರಪೀಡಿತ ತಾಲೂಕು ಎಂದು ಸರಕಾರ ಘೋಷಣೆ ಮಾಡಿ ಪರಿಹಾರ ಮಂಜೂರು ಮಾಡಿದರು ತಾಲೂಕಾ ಆಡಳಿತಾಧಿಕಾರಿಗಳು ಪರಿಹಾರದ ಹಣವನ್ನು ರೈತರಿಗೆ ಸರಿಯಾಗಿ ಜಮೆ ಮಾಡಿಲ್ಲ ಎಂದು ಕರ್ನಾಟಕ ರೈತ ಸಂಘ, ತಹಶೀಲ್ದಾರ ಕಛೇರಿ ಎದುರು ಪ್ರತಿಭಟನೆ ನಡೆಸಿ ಸರಿಯಾಗಿ ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿದರು.
ಪರಿಹಾರ ಬಾರದೇ ಇದ್ದ ರೈತರಿಗೆ ಅತಿ ಶೀಘ್ರದಲ್ಲಿ ಬರ ಪರಿಹಾರ ಸಂದಾಯವಾಗದಿದ್ದಲ್ಲಿ ಮೇ 20 ರಂದು ಕಿತ್ತೂರು ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರತಿಭಟಣಾ ನಿರತ ರೈತ ಹೋರಾಟಗಾರರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಮನವಿ ಸಲ್ಲಿಸಿದರು.
ಕಾಂಗ್ರೆಸ್ ಮುಖಂಡ ಹಬೀಬ ಶಿಲೇದಾರ ಹೋರಾಟನಿರತ ರೈತರನ್ನು ಉದ್ದೇಶಿಸಿ ಮಾತನಾಡಿ ಬರ ಪರಿಹಾರದ ಹಣ ತಾಲೂಕಿನ ಕೆಲ ರೈತರ ಖಾತೆಗೆ ಸಂದಾಯವಾಗಿಲ್ಲ ಮತ್ತು ಸರಕಾರ ನೀಡುತ್ತಿರುವ 02 ಸಾವಿರ ರೂಪಾಯಿ ಹಣ ಬಂದಿಲ್ಲ ಇದರಿಂದ ತಿಳಿದು ಬರುತ್ತಿದೆ. ಅಧಿಕಾರಿಗಳು ತಮ್ಮ ಕರ್ತವ್ಯ ನಿಷ್ಠೆಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ಆಪಾಧಿಸಿ ಕೂಡಲೇ ಫಲಾನುಭವಿಗಳಿಗೆ ಹಣ ಸಂದಾಯವಾಗುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರೈತ ಜಾಗೃತಿ ಸಂಘದ ಮುಖಂಡರಾದ ಬಿಷ್ಟಪ್ಪ ಶಿಂಧೆ, ಅಪ್ಪೇಶ ದಳವಾಯಿ ಮಾತನಾಡಿ ಫಲನುಭವಿ ರೈತರು ಅಧಿಕಾರಿಗಳಿಗೆ ತಮ್ಮ ದಾಖಲೆಗಳನ್ನು ಸರಿಯಾಗಿ ನೀಡಿದರು ಸಹ ಕೆಲ ಕಂದಾಯ ಇಲಾಖೆ ಅಧಿಕಾರಿಗಳು ಉದ್ದೇಶ ಪೂರಕವಾಗಿ ರೈತರಿಗೆ ಬರ ಪರಿಹಾರಸಿಗದಿರುವಂತೆ ದ್ರೋಹ ಎಸಗುವ ಮೂಲಕ ತಮ್ಮ ಕರ್ತವ್ಯ ಪ್ರಜ್ಜೆಯನ್ನು ಮರೆಯುತ್ತಿದ್ದಾರೆ ಎಂದು ಕಟ್ಟುವಾಗಿ ಟೀಕಿಸಿ ಅಂತಹ ಅಧಿಕಾರಿಗಳ ಮೇಲೆ ಶೀಘ್ರದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಹೋರಾಟದಲ್ಲಿ ಅಶೋಕ ದಳವಾಯಿ, ಮಡಿವಾಳಪ್ಪ ವರಗನ್ನವರ, ಅರ್ಜುನ ಮಡಿವಾಳರ, ಶಿವಪ್ಪ ಚಿನ್ನನವರ, ಅಶೋಕ ಕುಗಟಿ, ಮಹಾಂತೇಶ ಎಮ್ಮಿ, ಧಶರಥ ಮಡಿವಾಳರ ಸೇರಿದಂತೆ ಹಲವು ರೈತರು ಇದ್ದರು.