ಬಳ್ಳಾರಿ, ಮಾ.18.: ತುಂಗಭದ್ರ ಜಲಾಶಯದಿಂದ ಬಲದಂಡೆಯ ಕೆಳಮಟ್ಟದ ಕಾಲುವೆ (ಎಲ್.ಎಲ್.ಸಿ)ಗೆ ಕುಡಿಯುವ ನೀರು ಬಿಡುಗಡೆ ಮಾಡುವಂತೆ ರೈತರು ಆಗ್ರಹಿಸಿದ್ದಾರೆ.
ತುಂಗಭದ್ರ ರೈತ ಸಂಘದ ವತಿಯಿಂದ ಸಲ್ಲಿಸಿದ ಮನವಿಯಲ್ಲಿ, ದಿನಾಂಕ 14.11.2025ರಂದು ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ, ಜಲಾಶಯಕ್ಕೆ ಹೊಸ ಗೇಟ್‌ಗಳನ್ನು ಅಳವಡಿಸುವ ಹಿನ್ನೆಲೆಯಲ್ಲಿ ಬೇಸಿಗೆ ಬೆಳೆಗಳಿಗೆ ನೀರು ನೀಡಲು ಸಾಧ್ಯವಿಲ್ಲ ಎಂದು ತಿಳಿಸಲಾಗಿತ್ತು. ಆದರೆ ಕುಡಿಯುವ ನೀರಿಗಾಗಿ 20.03.2026ರಿಂದ ಎಲ್ಲಾ ಕಾಲುವೆಗಳಿಗೆ ನೀರು ಬಿಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ಇದಾದರೂ, ಸಭೆಯ ತೀರ್ಮಾನಕ್ಕಿಂತ ಮುಂಚಿತವಾಗಿ 16.03.2026ರಂದು ಎಡದಂಡೆ ಕಾಲುವೆಗೆ ಮಾತ್ರ ನೀರು ಬಿಡುಗಡೆ ಮಾಡಲಾಗಿದೆ. ಆದರೆ ಬಲದಂಡೆಯ ಕೆಳಮಟ್ಟದ ಕಾಲುವೆ ವ್ಯಾಪ್ತಿಯ ಕಂಪ್ಲಿ, ಕುರುಗೋಡು, ಸಿರುಗುಪ್ಪ ಹಾಗೂ ಬಳ್ಳಾರಿ ತಾಲ್ಲೂಕುಗಳಲ್ಲಿ ತೀವ್ರ ನೀರಿನ ಅಭಾವ ಉಂಟಾಗಿದೆ.
ಈ ಭಾಗದ ಕೆರೆಗಳು ಒಣಗಿಹೋಗಿದ್ದು, ಹಳ್ಳಗಳು ಹಾಗೂ ಹಗರಿಗಳಲ್ಲೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಜನರು ಮತ್ತು ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ತುಂಗಭದ್ರ ಬಲದಂಡೆ ಕೆಳಮಟ್ಟದ ಕಾಲುವೆಗೆ ಕುಡಿಯುವ ನೀರು ಬಿಡುಗಡೆ ಮಾಡುವಂತೆ ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ.


