ಅಥಣಿ: ಪ್ರತಿ ಟನ್ ಕಬ್ಬಿಗೆ ರಾಜ್ಯ ಸರಕಾರ 3300 ಘೋಷಣೆ ಮಾಡಿದ ಪರಿಣಾಮ ವಿವಿಧ ರೈತ ಸಂಘಟನೆಗಳು ಕಳೆದ ನಾಲ್ಕು ದಿನಗಳಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ಹಿಂಪಡೆದು ಸರಕಾರದ ನಿರ್ಧಾರ ಸ್ವಾಗತಿಸಿ ವಿಜಯೋತ್ಸವ ಆಚರಿಸಿದವು.
ಸ್ಥಳೀಯ ಶಿವಯೋಗಿ ವೃತ್ತದಲ್ಲಿ ರೈತರು ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ಸಿದರಾಯ ಭೋಸಗಿ, ರೈತರ ಪ್ರತಿಭಟನೆಗೆ ಮಣಿದು ಪ್ರತಿ ಟನ್ ಕಬ್ಬಿಗೆ 3300 ದರ ನಿಗದಿ ಮಾಡಿದೆ ಮತ್ತು ಸರಕಾರದ ಈ ನಿರ್ಧಾರವನ್ನು ರೈತ ಸಂಘಟನೆಗಳು ಸ್ವಾಗತಿಸಿದ ಹಿನ್ನಲೆಯಲ್ಲಿ ತಾವೂ ಪ್ರತಿಭಟನೆಯನ್ನು ಕೈ ಬಿಡಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಸಂಘದ ಮಹಾದೇವ ಮಡಿವಾಳ ಮಾತನಾಡಿ, ರಾಜ್ಯ ಸರಕಾರದ ನಿರ್ಧಾರವನ್ನು ನಾವು ಕೂಡ ಸ್ಚಾಗತಿಸಿಕೊಂಡು ಪ್ರತಿಭಟನೆ ಹಿಂದೆ ಪಡೆದಿದ್ದೇವೆ ಎಂದರು.
ಕರವೇ ಅಧ್ಯಕ್ಷ ಅಣ್ಣಾಸಾಹೇಬ ತೆಲಸಂಗ ಮಾತನಾಡಿ, ರೈತರ ಪ್ರತಿಭಟನೆಗೆ ಅಥಣಿ ಪಟ್ಟಣದ ವ್ಯಾಪಾರಸ್ಥರು, ಕನ್ನಡ ಪರ ಸಂಘಟನೆಗಳು, ಸಾರ್ವಜನಿಕರು ತನು, ಮನ, ಧನದಿಂದ ಸಹಾಯ, ಸಹಕಾರ ಮಾಡಿದ್ದು, ಅವರೆಲ್ಲರಿಗೂ ರೈತ ಸಂಘದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುವೆ ಎಂದರು.
ವಿಜಯೋತ್ಸವದಲ್ಲಿ ರೈತ ಮುಖಂಡರು, ಹಾಗೂ ರೈತ ಎಲ್ಲಾ ವಿವಿಧ ಸಂಘಟನೆಯ ಅಧ್ಯಕ್ಷರು, ಕನ್ನಡ ಪರ ಸಂಘಟನೆಗಳು, ವಕೀಲರ ಸಂಘ, ದಲಿತ ಸಂಘಟನೆ, ಮುಸ್ಲಿಂ ಸಮಾಜ, ತಾಲೂಕಾ ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳು ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.


