ಧಾರವಾಡ: ಭಾರತದ ಮಾಜಿ ಪ್ರಧಾನಿ ಹಾಗೂ ರೈತ ಹಿತೈಶಿಗಳಾದ ಶ್ರೀ ಚೌದರಿ ಚರಣಸಿಂಗ್ ಅವರ ಜನ್ಮ ದಿನಾಚರಣೆ ನಿಮಿತ್ತ ರಾಷ್ಟ್ರೀಯ ರೈತ ದಿನಾಚರಣೆಯನ್ನು ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ ಧಾರವಾಡ ಮತ್ತು ಎಡಿಮ್ ಅಗ್ರೋಇಂಡಸ್ಟಿಸ್ ಇಂಡಿಯಾ ಪ್ರೃಲಿ ಇವರ ಸಹಯೋಗದೊಂದಿಗೆ ಆಚರಿಸಲಾಯಿತು.
ಡಾ. ಎಸ್. ಸುರೇಶ, ಮಾನ್ಯ ಕುಲಪತಿಗಳು, ಕೃಷಿ ವಿಶ್ವವಿದ್ಯಾಲಯ, ಜಿ.ಕೆ.ವಿ.ಕೆ, ಬೆಂಗಳೂರು ಇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತ ಕೃಷಿ ಪ್ರಧಾನ ದೇಶ, ಕೃಷಿ ಮೂಲ ಕಸುಬು. ಸ್ವಾತಂತ್ರ ಪೂರ್ವದ ಸಾಂಪ್ರದಾಯಿಕ ಕೃಷಿಗೆ ಬದಲಾಗಿ ಪಂಚವಾರ್ಷಿಕ ಯೋಜನೆಗಳಲ್ಲಿ ಕೃಷಿಗೆ ಹೆಚ್ಚಿನ ಪ್ರಾದಾನ್ಯತೆ ನೀಡಿದ್ದರಿಂದ ಹಸಿರು ಕ್ರಾಂತಿಯ ಮೂಲಕ ಭಾರತ ಇಂದು ಆಹಾರ ಭದ್ರತೆ ಪಡೆದ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದರು. ಪ್ರಸ್ತುತ ಕೃಷಿ ಕ್ಲಿಷ್ಟಕರವಾಗಿದೆ.
ಸಮಸ್ಯೆಗಳು ಸವಾಲುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿದೆ. ಏಕ ಬೆಳೆ ಪದ್ಧತಿ, ಹರಿ ನೀರಾವರಿ ಹಾಗೂ ಹೆಚ್ಚು ರಸಗೊಬ್ಬರ, ಕೀಟನಾಶಕಗಳು, ಕಳೆನಾಶಕಗಳ ಬಳಕೆಯಿಂದ ಕೃಷಿ ಭೂಮಿಯಲ್ಲಿ ಸಾವಯವ ಇಂಗಾಲದ ಕೊರತೆ ಉಂಟಾಗಿ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಆಳದ ಕೊಳವೆ ಬಾವಿ ನೀರಿನಲ್ಲಿನ ಫ್ಲೋರೈಡ್ ಮತ್ತು ಇತರೆ ಲವಣಾಂಶಗಳು, ಸವಳು ಜವಳು ಸಮಸ್ಯೆ ಕೃಷಿ ಭೂಮಿಯನ್ನು ಬರಡಾಗಿಸುತ್ತಿವೆ.
ಅತೀ ಸಣ್ಣ ಹಿಡುವಳಿಗಳು, ಕೃಷಿ ಯಂತ್ರೋಪಕರಣಗಳ ದುಬಾರಿ ವೆಚ್ಚ, ಕೃಷಿ ಕಾರ್ಮಿಕರ ಕೊರತೆ, ರೈತನ ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನಗಳ ಕಾರಣದಿಂದಾಗಿ ಯುವಕರು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಆಸಕ್ತರಾಗಿಲ್ಲ.ಕೃಷಿ ಒಂದು ವಿಜ್ಞಾನ, ರೈತರು ಸಾಂಪ್ರದಾಯಿಕ ಕೃಷಿಗೆ ಬದಲಾಗಿ ವೈಜ್ಞಾನಿಕ ನಿಖರ ಕೃಷಿ ಮಾಡಬೇಕಾಗಿದೆ. ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು, ರೈತರು ಸಂಘಟಿತರಾಗಿ ಬೇಡಿಕೆಗೆ ಅನುಗುಣವಾದ ಬೆಳೆ, ರೈತ ಉತ್ಪಾದಕ ಸಂಸ್ಥೆ ಮೂಲಕ ಬೆಳೆಗಳ ಮೌಲ್ಯವರ್ಧನೆ ಮಾಡಿ ರೈತರೇ ಉದ್ದಿಮೆದಾರರಾಗಬೇಕೆಂದರು.
ಡಾ. ರಾಜೇಂದ್ರ ಪೋದ್ದಾರ, ನಿರ್ದೇಶಕರು, ವಾಲ್ಮೀ, ಧಾರವಾಡ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ರೈತರ ಹಿಂದಿನ ಸುಸ್ಥಿರ ಬದುಕನ್ನು ಇಂದಿನ ವಾಣಿಜ್ಯಕರಣ ಅಸ್ತವ್ಯಸ್ಥವಾಗಿಸಿದೆ ಎಂದರು. ರೈತ ಕೃಷಿಗಾಗಿ ಮಾಡಿದ ಉತ್ಪಾದನಾ ವೆಚ್ಚ ಹೆಚ್ಚಾಗಿದ್ದು, ಉತ್ಪನ್ನಗಳ ಬೆಳೆ ಕಡಿಮೆಯಾಗಿದೆ ಇದರಿಂದ ಒಕ್ಕಲುತನ ಸಂಕಷ್ಟದಲ್ಲಿದೆ ಎಂದರು. ರಾಷ್ಟ್ರ ಮತ್ತು ರಾಜ್ಯಕ್ಕೆ ಸಮಗ್ರ ಕೃಷಿ ನೀತಿಯ ಅವಶ್ಯಕತೆ ಇದೆ ಎಂದರು.
ಶ್ರೀ ಹೆಚ್.ಆರ್. ಪ್ರಕಾಶ, ಪ್ರಾಧ್ಯಾಪಕರು, ಸಂಪೂರ್ಣ ಕೃಷಿ ವಿದ್ಯಾಲಯ, ಮಂಡ್ಯ ಇವರು ಮಾತನಾಡುತ್ತಾ ರೈತರು ನೀರಿನ ಮಹತ್ವವನ್ನು ಅರಿತುಕೊಳ್ಳಬೇಕು ಎಂದರು. ನೀರಿಗೂ ಆರ್ಥಿಕ ಬೆಲೆ ಇದೆ ಮತ್ತು ಆರ್ಥಿಕ ಸಾಮಾಜಿಕ ಅಭಿವೃದ್ಧಿಗೆ ನೀರೇ ಪೂರಕ ಎಂದರು. ಮಳೆ ನೀರು ಕೊಯ್ದು, ಕೃಷಿ ಹೊಂಡಗಳ ಮಹತ್ವ ಕೃಷಿಯಲ್ಲಿ ಕೊಳವೆ ಬಾವಿ ನೀರಿನ ಉಪಯೋಗದ ದುಷ್ಪರಿಣಾಮ ಮತ್ತು ಆರ್ಥಿಕ ಹೊರೆ, ಸವಳು- ಜವಳು ಸಮಸ್ಯೆ ಪರಿಹಾರೋಪಾಯಗಳು, ಸಾವಯವ ಗೊಬ್ಬರದ ಬಳಕೆ, ಸಮಗ್ರ ಕೃಷಿ ಪದ್ಧತಿಯಿಂದ ಆರ್ಥಿಕ ಸಬಲತೆ ಇತ್ಯಾದಿ ವಿಷಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಶ್ರೀಮತಿ ನಾಗವ್ವ ಮಾರಿಹಾಳ, ಪ್ರಗತಿಪರ ಮಹಿಳೆ ಹೊನ್ನಾಪುರ, ಅಳ್ಳಾವರ ತಾಲ್ಲೂಕು ಮತ್ತು ಶ್ರೀ ರುದ್ರಪ್ಪ ಝಲಪಿ, ಸಾಧಕ ರೈತರು, ಹುಲ್ಯಾಳ, ಜಮಖಂಡಿ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ರಕ್ಷಿತಾ ಕೆ.ಆರ್. ಸಹಾಯಕ ವ್ಯವಸ್ಥಾಪಕರು, ಎಡಿಮ್ ಆಗೋ ಇಂಡಸ್ಟ್ರೀಸ್ ಇಂಡಿಯಾ ಪ್ರೈ, ಲಿ ಧಾರವಾಡ ಮತ್ತು ಸಿಬ್ಬಂದಿಗಳು, ಡಾ. ಮೋಹನ್ ನಾಯಕ, ಡೀನ್, ಜಿ.ಕೆ.ವಿ.ಕೆ, ಬೆಂಗಳೂರು, ಡಾ. ರಘುಪ್ರಸಾದ ಅಸೋಸಿಯೇಟ್ ಡೈರೆಕ್ಟರ್ ಆಪ್ ಎಕ್ಸಟೆನಶನ್, ಡಾ. ಮಹಾದೇವ ಮೂರ್ತಿ, ಪ್ರಾಧ್ಯಾಪಕರು, ಜಿ.ಕೆ.ವಿ.ಕೆ, ಬೆಂಗಳೂರು, ಬೆಳಗಾವಿ, ಹಾವೇರಿ, ಬಾಗಲಕೋಟೆ, ಧಾರವಾಡ, ಗದಗ ಜಿಲ್ಲೆಗಳ ರೈತರು, ವಾಲ್ಮೀ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.
ಶ್ರೀ ಇಂದುಧರ ಹಿರೇಮಠ, ಸಹಾಯಕ ಪ್ರಾಧ್ಯಾಪಕರು ಮತ್ತು ಶ್ರೀ ನಾಗರಾಜ ತಹಶೀಲ್ದಾರ, ಸಹಾಯಕ ಪ್ರಾಧ್ಯಾಪಕರು ಕಾರ್ಯಕ್ರಮ ಸಂಯೋಜಿಸಿದರು. ಇಂ. ಪ್ರಭಾಕರ ಹಾದಿಮನಿ, ಸಹಾಯಕ ನಿರ್ದೇಶಕರು ಸ್ವಾಗತಿಸಿದರು ಮತ್ತು ಶ್ರೀ ಮಹದೇವಗೌಡ ಹುತ್ತನಗೌಡರ, ಸಹಾಯಕ ಅಭಿಯಂತರರು ಕಾರ್ಯಕ್ರಮ ನಿರೂಪಿಸಿದರು.