ಬೆಂಗಳೂರು, (ಮಾರ್ಚ್ 24): ಬಿರು ಬೇಸಿಗೆ ಮಧ್ಯ ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಇಂದು ಮಾರ್ಚ್ 24 ಮಳೆಯಾಗಿದೆ ಹವಾಮಾನ ಇಲಾಖೆಯ ಹೇಳಿದಂತೆ ಪೂರ್ವ ಮುಂಗಾರು ಚುರುಕು ಪಡೆದುಕೊಂಡಿದ್ದು, ಬೇಸಿಗೆಯಲ್ಲಿಯೂ ಉತ್ತಮ ಮಳೆಯಾಗುತ್ತಿದೆ. ಹೌದು…ವಿಜಯಪುರ, ಬಾಗಲಕೋಟೆ, ಹಾಸನ, ಕೊಡಗು ಜಿಲ್ಲೆಯಲ್ಲಿ ಮಳೆಯಾಗಿದ್ದು, ಬಿಸಿಲು, ಧಗೆಯಿಂದ ಸುಡುತ್ತಿದ್ದ ಧರೆ ತಂಪಾಗಿ ತಂಪನೆಯ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಜನರು ಫುಲ್ ಖುಷ್ ಆಗಿದ್ದರೆ, ಇನ್ನು ಕೆಲವೆಡೆ ಮಳೆಗೆ ಬೆಳೆ ಹಾನಿ ಬಗ್ಗೆ ರೈತರು ಆತಂಕಗೊಂಡಿದ್ದಾರೆ.
ಕೊಡಗು ಜಿಲ್ಲೆಯ ಹಲವೆಡೆ ಇಂದು (ಮಾರ್ಚ್ 24) ವರ್ಷದ ಮೊದಲ ಮಳೆಯಾಗಿದೆ. ಮಡಿಕೇರಿ ನಗರ ಸೇರಿದಂತೆ ಹಲವೆಡೆ ಆಲಿಕಲ್ಲು ಮಳೆಯಾಗುತ್ತಿದ್ದು, ಕಾಫಿ ಬೆಳೆಗಾರರಲ್ಲಿ ಮಂದಹಾಸ ಮೂಡಿದೆ. ಗುಡುಗು ಸಿಡಿಲು ಆಲಿಕಲ್ಲು ಸಹಿತ ವರುಣ ಅಬ್ಬರಿಸಿದ್ದು, ಬಿಸಿಲಿನಿಂದ ಸುಡುತ್ತಿದ್ದ ಭೂಮಿ ತಂಪಾಗಿದೆ.
ಈ ಬೇಸಿಗೆಯಲ್ಲೂ ಕಳೆದ ಮೂರು ದಿನಗಳಿಂದ ಹಾಸನ ಜಿಲ್ಲೆಯಲ್ಲಿ ಮಳೆಯಾಗುತ್ತಿದೆ. ಇಂದೂ ಸಹ ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು ತಾಲ್ಲೂಕಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು , ಇದರಿಂದ ವಾಹನ ಸವಾರರು, ವಿದ್ಯಾರ್ಥಿಗಳ ಪರದಾಡುವಂತಾಗಿದೆ. ಮತ್ತೊಂದೆಡೆ ಉತ್ತಮ ಮಳೆಯಿಂದ ರೈತರು ಹಾಗೂ ಕಾಫಿ ಬೆಳೆಗಾರರು ಫುಲ್ ಖುಷ್ ಆಗಿದ್ದಾರೆ.
ಬೆಳಗ್ಗೆಯಿಂದ ಬಿರು ಬಿಸಿಲಿನಿಂದ ಕಾದು ಕೆಂಡವಾಗಿದ್ದ ವಿಜಯಪುರ ಜಿಲ್ಲೆಯಲ್ಲೂ ಸಹ ವರುಣ ತಂಪೆರೆದಿದ್ದಾನೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಂಗಾಪುರದಲ್ಲಿ ಕಳೆದ ಅರ್ಧ ಗಂಟೆಯಿಂದ ಗುಡುಗು, ಮಿಂಚು ಸಹಿತ ಆಲಿಕಲ್ಲು ಮಳೆಯಾಗುತ್ತಿದೆ.
ಇದರಿಂದ ಬಿಸಿಲಿನ ಝಳದಿಂದ ಕಂಗೆಟ್ಟಿದ್ದವರಿಗೆ ಮಳೆರಾಯ ತಂಪೆರೆದಿದ್ದಾನೆ ಇನ್ನೊಂದೆಡೆ ಈ ಆಲಿಕಲ್ಲು ಮಳೆಯಿಂದ ತೋಟಗಾರಿಕೆ ಬೆಳೆಗೆ ಹಾನಿ ಆತಂಕ ಎದುರಾಗಿದೆ. ದ್ರಾಕ್ಷಿ, ದಾಳಿಂಬೆ, ನಿಂಬೆ ಬೆಳೆಗಾರರಲ್ಲಿ ಆತಂಕ ಮನೆಮಾಡಿದೆ. ಈ ಗಾಳಿ ಮಳೆ ಹೊಡೆತಕ್ಕೆ ನಾಗನೂರು ಗ್ರಾಮದಲ್ಲಿ ಅಣ್ಣಪ್ಪ ಶಿರಹಟ್ಟಿ ಎಂಬುವರ ಗೋವಿನಜೋಳ ನೆಲಕ್ಕೆ ಉರುಳಿದೆ.