ಅ.೧೩ರಂದು ರೈತ-ಕಾರ್ಮಿಕರ ಜಿಲ್ಲಾಮಟ್ಟದ ಜಂಟಿ ಸಮಾವೇಶ

Ravi Talawar
ಅ.೧೩ರಂದು ರೈತ-ಕಾರ್ಮಿಕರ ಜಿಲ್ಲಾಮಟ್ಟದ ಜಂಟಿ ಸಮಾವೇಶ
WhatsApp Group Join Now
Telegram Group Join Now
ಬಳ್ಳಾರಿ,ಅ.೦4: ಅಮೇರಿಕಾ ಅಧ್ಯಕ್ಷ ಟ್ರಂಪ್‌ನ ಸುಂಕ ದೌರ್ಜನ್ಯ ದಿಕ್ಕರಿಸಿ ದೇಶದ ಕೃಷಿ ಹಾಗೂ ಕೈಗಾರಿಕೆಗಳ ರಕ್ಷಿಸಿ ಎಂಬ ಶಿರೋನಾಮೆ ಅಡಿಯಲ್ಲಿ ರೈತ-ಕಾರ್ಮಿಕರ ಜಿಲ್ಲಾಮಟ್ಟದ ಜಂಟಿ ಸಮಾವೇಶವನ್ನು ನಗರದ ಗಾಂಧಿಭವನದಲ್ಲಿ ಅ.೧೩ರಂದು ಬೆಳಿಗ್ಗೆ ೧೧ ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಯು.ಬಸವರಾಜ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿರುವ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಮೇರಿಕಾ ದೇಶದ ಅಧ್ಯಕ್ಷ ಟ್ರಂಪ್‌ರವರು ಈಚೆಗೆ ಜಗತ್ತಿನ ಮೇಲೆ, ಆ ದೇಶಕ್ಕೆ ರಫ್ತು ಮಾಡಲಾದ ವಸ್ತುಗಳ ಮೇಲೆ ಆಮದು ಸುಂಕ ಹೆಚ್ಚಳ ಮಾಡುವ ಮೂಲಕ ಬೆದರಿಕೆ ಒಡ್ಡಿದ್ದಾರೆ. ನಮ್ಮ ದೇಶದಿಂದ ಆ ದೇಶದಲ್ಲಿ ಮಾರಾಟವಾಗುವ ವಸ್ತುಗಳ ಮೇಲೆಯೂ ಆಮದು ಸುಂಕವನ್ನು ಈ ಮೊದಲು ಶೇ.೨೫ ರಷ್ಟು ಮತ್ತು ನಂತರ ಮರಳಿ ಶೇ.೨೫ ರಷ್ಟು ಒಟ್ಟಾರೆ ಶೇ.೫೦ ರಷ್ಟು ಸುಂಕ ಹೇರಿದ್ದಾರೆ ಮಾತ್ರವಲ್ಲಾ ಶೇ ೧೦೦ ರಷ್ಟು ಹೇರುವುದಾಗಿ ಮತ್ತು ತನ್ನಂತೆ ಯುರೋಪ್ ದೇಶಗಳು, ಭಾರತದ ವಸ್ತುಗಳ ಮೇಲೆ ಸುಂಕ ಹೇರುವಂತೆ ಒತ್ತಡ ಹೇರುತ್ತಿದ್ದಾರೆ.
ಇದರಿಂದ ನಮ್ಮ ೧೦೦ ರೂಗೆ ಮಾರಾಟವಾಗುವ ವಸ್ತುಗಳ ಬೆಲೆ ೧೫೦ ರೂ ಅಥವಾ ೨೦೦ ರೂ ಗೆ ಹೆಚ್ಚಾಗಲಿದೆ. ಈ ಬೆಲೆ ಏರಿಕೆಯಿಂದ ವಸ್ತುಗಳು ಮಾರಾಟವಾಗದೇ ಹಾಗೆ ಉಳಿಯುವ ಅಪಾಯ ಬಂದಿದೆ. ಇದರಿಂದ ಭಾರತದ ಕೃಷಿ ಹಾಗು ಕೈಗಾರಿಕಾ ಉತ್ಪನ್ನಗಳು ಮಾರುಕಟ್ಟೆಯಿಲ್ಲದೆ, ಭಾರತದ ಕೃಷಿ ಹಾಗು ಕೈಗಾರಿಕೆಗಳು ಉತ್ಪಾದಿಸುವುದನ್ನು ನಿಲ್ಲಿಸಬೇಕಾಗುತ್ತದೆ. ಪರಿಣಾಮ ರೈತರು ಅವರ ಕೃಷಿ ಉತ್ಪನ್ನಗಳಿಗೆ ಅಗತ್ಯ ಬೆಲೆ ದೊರೆಯದೆ ಸಾಲಬಾಧಿತರಾಗಲಿದ್ದಾರೆ. ಕಾರ್ಮಿಕರು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಮುಖ್ಯವಾಗಿ, ಗಾರ್ಮೆಂಟ್ ಉತ್ಪನ್ನಗಳಾದ ಉಡುಪುಗಳು, ಸೀಗಡಿ ಮೀನು, ಚರ್ಮದ ವಸ್ತುಗಳು, ಸಣ್ಣ ಕೈಗಾರಿಕೆಗಳ ಉತ್ಪನ್ನಗಳು, ಜನೌಷಧಿಗಳು ಮಾರುಕಟ್ಟೆಯ ಎದುರಿಸಿ ಲಕ್ಷಾಂತರ ಜನರ ಉದ್ಯೋಗಕ್ಕೆ ಮಾರಕವಾಗಲಿವೆ ಎಂದು ಅವರು ಹೇಳಿದರು.
ಟ್ರಂಪ್ ರವರು ತಮ್ಮ ದೇಶದ ಕೃಷಿ ಹಾಗು ಕೈಗಾರಿಕಾ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಒಂದೆಡೆ ತಮ್ಮ ದೇಶಕ್ಕೆ ಬರುವ ವಸ್ತುಗಳ ಮೇಲೆ ಆಮದು ಸುಂಕ ಹೇರುತ್ತಾ ಬೆದರಿಸುತ್ತಾ ತಮ್ಮ ದೇಶದ ಕೃಷಿ ಉತ್ಪನ್ನಗಳು, ಡೈರಿ ಉತ್ಪನ್ನಗಳು, ಮೀನು ಮುಂತಾದವುಗಳಿಗೆ ಸುಂಕ ವಿಲ್ಲದ ಮುಕ್ತ ಅವಕಾಶ ನೀಡುವಂತೆ ನಮ್ಮ ದೇಶವೂ ಸೇರಿದಂತೆ ಹಲವು ದೇಶಗಳ ಮೇಲೆ ಒತ್ತಡ ಹೇರುತ್ತಿದ್ದಾರೆ.
ಈಗಾಗಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಒತ್ತಡಕ್ಕೆ ಮಣಿದು ಹತ್ತಿಯ ಮೇಲಿದ್ದ ಶೇ.೧೧ರ ಆಮದು ಸುಂಕವನ್ನು ವಾಪಾಸು ಪಡೆದು, ಲಕ್ಷಾಂತರ ಹತ್ತಿಬೆಳೆಗಾರ¬ರಿಗೆ ಭಾರೀ ನಷ್ಟ ಉಂಟು ಮಾಡಿದ್ದಾರೆ. ಇನ್ನೊಂದು ಕಡೆ ಗಾರ್ಮೆಂಟ್ ಉತ್ಪನ್ನಗಳಾದ ಉಡುಪುಗಳ ರಫ್ತಿನ ಮೇಲೆ ಟ್ರಂಪ್ ಶೇ.೫೦ ಸುಂಕ ಹೇರಿದ್ದಾರೆ. ಈ ಉಭಯ ದಾಳಿಗಳಿಂದ ರಾಜ್ಯದ ೨೦ ಲಕ್ಷ ಎಕರೆ ಪ್ರದೇಶದ ಹತ್ತಿ ಬೆಳೆಗಾರರು, ಹತ್ತಿ ಆಧಾ¬ರಿತ ಜಿನ್ನಿಂಗ್ ಹಾಗೂ ಕಾಟನ್ ಮಿಲ್‌ಗಳು ಮತ್ತು ಗಾರ್ಮೆಂಟ್ ಇಂಡಸ್ಟ್ರಿಗಳು ತೀವ್ರ ಸಂಕಷ್ಟಕ್ಕೀಡಾಗಲಿವೆ. ಅಲ್ಲಿ ದುಡಿಯುವ ಲಕ್ಷಾಂತರ ಉದ್ಯೋಗಿಗಳು ಇದೀಗ ತೀವ್ರ ರೀತಿಯ ಉದ್ಯೋಗದ ಅಭದ್ರತೆಯಲ್ಲಿದ್ದಾರೆ, ಕೈಗಾರಿಕೆಗಳು ನಷ್ಟಕ್ಕೀಡಾಗಲಿವೆ ಎಂದರು.
ಟ್ರAಪ್‌ರವರ ಒತ್ತಡಗಳಿಗೆ ಮಣಿದು ಅಮೇರಿಕಾ ಮೊದಲಾದ ಮುಂದುವರೆದ ದೇಶಗಳ ಉತ್ಪನ್ನಗಳಿಗೆ ಮುಕ್ತವಾಗಿ ದೇಶವನ್ನು ತೆರೆಯುವುದು ಕೇವಲ ಕೃಷಿ ಹಾಗೂ ಕೈಗಾರಿಕೆಗಳ ನಾಶಕ್ಕೆ ದಾರಿ ಮಾತ್ರವಲ್ಲಾ ದೇಶದ ಆಹಾರ ಭದ್ರತೆಗೆ, ಸ್ವಾವಲಂಬನೆಗೆ ಹಾಗೂ ಸಾರ್ವಭೌಮತೆಗೂ ಧಕ್ಕೆಯಾಗಲಿದೆ. ಆದ್ದರಿಂದ ಕೇಂದ್ರ ಸರಕಾರ ಟ್ರಂಪ್ ರವರ ಒತ್ತಡಕ್ಕೆ ಮಣಿಯಬಾರದು ಮತ್ತು ದ್ವಿಪಕ್ಷೀಯ ಒಪ್ಪಂದದ ಮುಕ್ತ ಆಮದು ನೀತಿಯನ್ನು ತಿರಸ್ಕರಿಸಬೇಕು ಹಾಗೂ ಅಮೇರಿಕಾ ಹೇರಿದ ಆಮದು ಸುಂಕವನ್ನು ಇಳಿಸಲು ಒತ್ತಾಯಿಸಬೇಕು. ಈ ಕುರಿತು ರಾಜ್ಯ ಸರಕಾರವೂ, ಕೇಂದ್ರ ಸರಕಾರದ ಮೇಲೆ ಅಗತ್ಯ ಒತ್ತಡವನ್ನು ಹೇರಬೇಕಾಗಿದೆ. ಹೀಗಾಗಿ, ಈ ಎರಡೂ ಸರಕಾರಗಳನ್ನು ಒತ್ತಾಯಿಸಿ, ಕೃಷಿ ಹಾಗು ಕೈಗಾರಿಕೆಗಳನ್ನು ರಕ್ಷಿಸಲು ಈ ಬಳ್ಳಾರಿ ಜಿಲ್ಲಾ ಮಟ್ಟದ ಜಂಟಿ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ ಎಂದು ಅವರು ವಿವ¬ರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಹೋರಾಟಗಾರ ಜೆ.ಸತ್ಯಬಾಬು, ವಿ.ಎಸ್.ಶಿವಶಂಕರ್, ಜೆ.ಎಮ್.ಚನ್ನಬಸಯ್ಯ, ತಿಪ್ಪಯ್ಯ, ಎಂ.ತಿಪ್ಪೇಸ್ವಾಮಿ, ಎ.ಸ್ವಾಮಿ, ಗಾಳಿ ಬಸವರಾಜ್ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article