ಕುಟುಂಬವೇ ಮಕ್ಕಳ ರಕ್ಷಾಕವಚ – ಶಾರದಾಬಾಯಿ ಮರಾಠಿ

Sandeep Malannavar
ಕುಟುಂಬವೇ ಮಕ್ಕಳ ರಕ್ಷಾಕವಚ – ಶಾರದಾಬಾಯಿ ಮರಾಠಿ
WhatsApp Group Join Now
Telegram Group Join Now

ಖಾನಾಪುರ: ಮಕ್ಕಳ ಸುರಕ್ಷತೆ ಮತ್ತು ಸಮಗ್ರ ಬೆಳವಣಿಗೆಯಲ್ಲಿ ಕುಟುಂಬದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಸಹಾಯಕ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಶಾರದಾಬಾಯಿ ಮರಾಠಿ ಹೇಳಿದರು.

ಮೈ ಚಾಯ್ಸ ಫೌಂಡೇಶನ್ (ಹೈದರಾಬಾದ್)ನ ಆಪರೇಷನ್ ರೆಡ್ ಅಲರ್ಟ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಖಾನಾಪುರ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಖಾನಾಪುರ ತಾಲೂಕಿನ ಪಾರಿಶ್ವಾಡ ಗ್ರಾಮದಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾರಿಶ್ವಾಡದ ವಿದ್ಯಾರ್ಥಿಗಳಿಗೆ ಹಾಗೂ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪಾಲಕರಿಗೆ ಮಕ್ಕಳ ಹಕ್ಕುಗಳು ಮತ್ತು ಸುರಕ್ಷತೆ ಕುರಿತು ಮಾಹಿತಿ ನೀಡಲಾಯಿತು.

ಮುಖ್ಯ ಅತಿಥಿಯಾಗಿ ಮಾತನಾಡಿದ ಶಾರದಾಬಾಯಿ ಮರಾಠಿ, “ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ಮಗುವಿನ ಜೀವನದ ಅಡಿಪಾಯ ಮನೆಯಲ್ಲೇ ನಿರ್ಮಾಣವಾಗುತ್ತದೆ. ಮಕ್ಕಳು ಮಾತನಾಡುವುದೂ, ನಡೆದುಕೊಳ್ಳುವುದೂ, ಸರಿ–ತಪ್ಪಿನ ವ್ಯತ್ಯಾಸವನ್ನು ಕಲಿಯುವುದೂ ಕುಟುಂಬದ ವಾತಾವರಣದಿಂದಲೇ. ಆದ್ದರಿಂದ ಮಕ್ಕಳನ್ನು ಸುರಕ್ಷಿತವಾಗಿ ಹಾಗೂ ಸರಿಯಾದ ದಾರಿಯಲ್ಲಿ ಬೆಳೆಸುವ ಜವಾಬ್ದಾರಿ ಕುಟುಂಬದ ಮೇಲಿದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಐಸಿಡಿಎಸ್ ಮೇಲ್ವಿಚಾರಕಿ ಸರಸ್ವತಿ ಬಡಸ ಅವರು ಬಾಲ್ಯವಿವಾಹ, ಮಹಿಳಾ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ, ಪಾಕ್ಸೊ (POCSO) ಕಾಯ್ದೆ ಹಾಗೂ ಡಿಜಿಟಲ್ ಮಾಧ್ಯಮಗಳ ದುರುಪಯೋಗ ಕುರಿತು ವಿವರಿಸಿದರು. ಬಾಲ್ಯವಿವಾಹವು ಅಪರಾಧವಾಗಿದ್ದು, ಅದು ಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅಪ್ರಾಪ್ತರ ವಿವಾಹಕ್ಕೆ ಕಾನೂನು ಗಟ್ಟಿ ಶಿಕ್ಷೆ ವಿಧಿಸುತ್ತದೆ ಎಂದು ಎಚ್ಚರಿಸಿದರು.

ಚಂದ್ರಕಲಾ .ಕೆ ಅವರು ಉದ್ಯೋಗ ಅಥವಾ ಮದುವೆಯ ನೆಪದಲ್ಲಿ ಮಕ್ಕಳನ್ನೂ ಯುವತಿಯರನ್ನೂ ನಗರಗಳಿಗೆ ಕರೆದೊಯ್ದು ದುರುಪಯೋಗ ಮಾಡುವ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸಿ, ಸಂಶಯಾಸ್ಪದ ಚಟುವಟಿಕೆಗಳು ಕಂಡುಬಂದರೆ ತಕ್ಷಣ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಿದರು.

ಸೌಮ್ಯ ಹಿರೇಮಠ ಅವರು ಪಾಕ್ಸೊ ಕಾಯ್ದೆ ಕುರಿತು ಮಾಹಿತಿ ನೀಡಿ, ಮಕ್ಕಳ ಮೇಲಿನ ಯಾವುದೇ ರೀತಿಯ ದೈಹಿಕ ಹಾಗೂ ಮಾನಸಿಕ ದೌರ್ಜನ್ಯ ಗಂಭೀರ ಅಪರಾಧವಾಗುತ್ತದೆ ಎಂದು ತಿಳಿಸಿದರು. ಮಕ್ಕಳು ಧೈರ್ಯವಾಗಿ ಮಾತನಾಡಬೇಕು, ಪೋಷಕರು ಮಕ್ಕಳ ಮಾತನ್ನು ಗಮನದಿಂದ ಕೇಳಬೇಕು ಎಂಬ ಸಂದೇಶ ನೀಡಿದರು.

ಬಸವರಾಜ ಗುಗ್ಗರಿ ಅವರು ಸಾಮಾಜಿಕ ಮಾಧ್ಯಮಗಳ ದುರ್ಬಳಕೆ, ಅಪರಿಚಿತರ ಸ್ನೇಹ ವಿನಂತಿಗಳು, ಫೋಟೋ ಹಂಚಿಕೆ, ನಕಲಿ ಖಾತೆಗಳು ಹಾಗೂ ಆನ್‌ಲೈನ್ ಮೋಸಗಳ ಅಪಾಯಗಳ ಬಗ್ಗೆ ಪೋಷಕರು ಮತ್ತು ಮಕ್ಕಳಿಗೆ ಎಚ್ಚರಿಕೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಕ್ಷಯ ಅಗಸಿಮನಿ, “ಕುಟುಂಬ–ಶಾಲೆ–ಗ್ರಾಮ–ಸರ್ಕಾರ ಎಲ್ಲರೂ ಒಂದಾಗಿ ಮಕ್ಕಳನ್ನು ರಕ್ಷಿಸಿದಾಗ ಮಾತ್ರ ಸಮಾಜದ ಭವಿಷ್ಯ ಬಲವಾಗಿರುತ್ತದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಿಡಿಒ ಸಂತೋಷ ನಾವಲಗಿ, ಗ್ರಾಮ ಪಂಚಾಯಿತಿಯ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article