ಚಿಕ್ಕಮಗಳೂರು, ಸೆಪ್ಟೆಂಬರ್ 30: ಶೃಂಗೇರಿ, ಹೊರನಾಡು ಅನ್ನಪೂರ್ಣೇಶ್ವರಿ ಸೇರಿದಂತೆ ಕರ್ನಾಟಕದ ಪ್ರತಿಷ್ಠಿತ ದೇವಾಲಯಗಳ ಹೆಸರಿನಲ್ಲಿ ನಕಲಿ ವೆಬ್ಸೈಟ್ ತೆರೆದು ಭಕ್ತರಿಂದ ಕೋಟ್ಯಂತರ ರೂಪಾಯಿ ಹಣ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ, ಶೃಂಗೇರಿ ಮಠ ಸೇರಿದಂತೆ ರಾಜ್ಯದ ಪ್ರಮುಖ ದೇವಾಲಯಗಳ ಪ್ರಸಾದ ಮತ್ತು ವಿಶೇಷ ಪೂಜೆಯ ಹೆಸರಿನಲ್ಲಿ ಹಣ ಸಂಗ್ರಹಿಸಿ ವಂಚಿಸುತ್ತಿದ್ದ ತೆಲಂಗಾಣ ಮೂಲದ ಸುದೀಪ್ ಹಾಗೂ ಅನಿಲ್ ಕುಮಾರ್ ಎಂಬವರನ್ನು ಚಿಕ್ಕಮಗಳೂರು ಸೆನ್ ಪೊಲೀಸ್ ಠಾಣೆಯ ಡಿವೈಎಸ್ಪಿ ನೇತೃತ್ವದ ತಂಡ ಬಂಧಿಸಿದೆ.
ವಿಶೇಷ ಪೂಜೆ, ಪ್ರಸಾದ, ಸೇವೆಗಳ ಹೆಸರಿನಲ್ಲಿ ವಂಚನೆ ನಡೆಯುತ್ತಿರುವ ಬಗ್ಗೆ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ನಿರಂತರವಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ದೇವಾಲಯದ ಉಪವ್ಯವಸ್ಥಾಪಕ ರಾಘವೇಂದ್ರ ಅವರು ಕಳಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಆಮ್ಟೆ ವಿಶೇಷ ತಂಡ ರಚಿಸಿ ಆರೋಪಿಗಳ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.


