ಮಂಗಳೂರು, ಸೆಪ್ಟೆಂಬರ್ 12: ಧರ್ಮಸ್ಥಳ ‘ಬುರುಡೆ’ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಇದೀಗ ಮತ್ತೊಂದು ಪ್ರಮುಖ ನಿರ್ಧಾರಕ್ಕೆ ಬಂದಿದೆ. ‘ಬುರುಡೆ’ ಪ್ರಕರಣದ ಜತೆಗೆ ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಶವ ದಫನ ದಾಖಲೆಗಳತ್ತವೂ ಎಸ್ಐಟಿ ಗಮನ ಕೇಂದ್ರೀಕರಿಸಿದೆ. ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶವಗಳ ದಫನದಲ್ಲೇ ಅಕ್ರಮ ಎಸಗಲಾಗಿದೆ. ಹೆಣಗಳನ್ನು ಹೂತು ಹಾಕಲು ಫೋರ್ಜರಿ ದಾಖಲೆ ಸೃಷ್ಟಿಸಲಾಗಿದೆ ಎಂದು ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಆರೋಪಿಸಿದ್ದರು. ಎಸ್ಐಟಿ ಕಚೇರಿಗೆ ದಾಖಲೆಗಳನ್ನೂ ಸಲ್ಲಿಸಿದ್ದರು. ಹೀಗಾಗಿ ಪಂಚಾಯತ್ ದಫನ ದಾಖಲೆಗಳ ಆಳವಾದ ಪರಿಶೀಲನೆಗೆ ಎಸ್ಐಟಿ ಮುಂದಾಗಿದೆ.
ಧರ್ಮಸ್ಥಳ ಬುರುಡೆ ಪ್ರಕರಣ ಸಂಬಂಧ ಬಂಗ್ಲೆಗುಡ್ಡ ರಹಸ್ಯ ಬಯಲು ಮಾಡಲು ಎಸ್ಐಟಿ ಅಧಿಕಾರಿಗಳು ಪಣತೊಟ್ಟಿದ್ದು, ಗೋಪ್ಯವಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಗುರುವಾರ ಸಂಜೆ ವೇಳೆ ಮತ್ತೆ ಬಂಗ್ಲೆಗುಡ್ಡದಲ್ಲಿ ಎಸ್ಐಟಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಎಸ್ಐಟಿ ಅಧಿಕಾರಿ ಸೈಮನ್ ನೇತೃತ್ವದಲ್ಲಿ ಈ ಕಾರ್ಯ ನಡೆಯುತ್ತಿದ್ದು, ಸೌಜನ್ಯ ಮಾವ ವಿಠಲ ಗೌಡ ಹೇಳಿಕೆಯ ಸತ್ಯಾಸತ್ಯತೆ ತಿಳಿಯಲು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.