ಬೆಂಗಳೂರು,20: ಸಿದ್ದರಾಮಯ್ಯ ಅವರು ರಾಜ್ಯದ 22ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಇಂದಿಗೆ 1 ವರ್ಷಗಳು ಕಳೆದಿದ್ದು, ಈ ನಡುವಲ್ಲೇ ಸರ್ಕಾರದ ವಿರುದ್ಧ ಬಿಜೆಪಿ ವ್ಯಂಗ್ಯವಾಡಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ.ವಿಜಯೇಂದ್ರ ಅವರು, ಪೂರೈಸಿದ್ದು ವರುಷ ಮಾತ್ರ. ಸಾಧಿಸಿದ್ದು ಶೂನ್ಯ. ಖಜಾನೆ ಖಾಲಿ ಖಾಲಿ, ವಸೂಲಿ ಭಾರಿ ಭಾರಿ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಂದು ವರ್ಷದಲ್ಲಿ ಬಿಟ್ಟಿ ಭಾಗ್ಯಗಳಿಗಾಗಿ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ ಪರಿಣಾಮ: ನಿರುದ್ಯೋಗದ ಭವಣೆ ಹೆಚ್ಚಿತು. ಶಿಕ್ಷಣ ಕ್ಷೇತ್ರ ಎಡವಿ ಬಿದ್ದಿತು, ಉತ್ಪನ್ನ ಕ್ಷೇತ್ರ ಸೊರಗಿತು, ನಾರಿ ಕುಲ ರಕ್ಷಣೆ ಇಲ್ಲದೆ ನಲುಗಿತು, ದಲಿತ ಕಲ್ಯಾಣ ಕಾರ್ಯಗಳು ಕುಸಿಯಿತು, ದುಳಿದವರ ಅಭಿವೃದ್ಧಿ, ಹಿಂದುಳಿಯಿತು.ಬೆಳೆಯೆಲ್ಲ ಒಣಗಿತು, ರೈತರ ಬಾಳು ಗೋಳಾಯಿತು ಎಂದು ಟೀಕಿಸಿದ್ದಾರೆ.
ರಾಜ್ಯ ಬಿಜೆಪಿ ನಾಯಕರು ಇಂದು ಸರ್ಕಾರದ ವಿರುದ್ಧ ಆರೋಪ ಪಟ್ಟಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದು, ರಾಜ್ಯದಾದ್ಯಂತ ಇಂದು ಪ್ರತಿಭಟನೆ ನಡೆಸಿ, ರಾಜ್ಯಾಪಾಲರಿಗೆ ದೂರು ನೀಡಲು ಮುಂದಾಗಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಆರೋಪ ಸೇರಿದಂತೆ ಸರ್ಕಾರದ ವೈಫಲ್ಯಗಳನ್ನು ಒಳಗೊಂಡ ಜಾರ್ಜ್ ಶೀಟ್ ನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮತ್ತು ಪಕ್ಷದ ರಾಜ್ಯ ಮುಖ್ಯಸ್ಥ ಬಿ ವೈ ವಿಜಯೇಂದ್ರ ಬಿಡುಗಡೆ ಅವರು ಇಂದು ಬಿಡುಗಡೆ ಮಾಡಲಿದ್ದಾರೆಂದು ತಿಳಿದುಬಂದಿದೆ.
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ, ಹುಬ್ಬಳ್ಳಿಯಲ್ಲಿ ಇಬ್ಬರು ಮಹಿಳೆಯರ ಹತ್ಯೆ, ತಮಿಳುನಾಡಿಗೆ ಕಾವೇರಿ ನೀರು ಬಿಡುವ ರಾಜ್ಯ ಸರ್ಕಾರದ ನಿರ್ಧಾರ, ಬರ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲತೆ ಮುಂತಾದ ವಿಷಯಗಳು ಚಾರ್ಜ್‌ಶೀಟ್‌ನಲ್ಲಿ ಇರುವ ಸಾಧ್ಯತೆಗಳಿವೆ.
ಅಲ್ಲದೆ, ಐದು ಗ್ಯಾರಂಟಿ ಯೋಜನಗೆಳ ಅನುಷ್ಠಾನಕ್ಕೆ ಆದ್ಯತೆ ನೀಡುವ ಮೂಲಕ ಅಭಿವೃದ್ಧಿಯತ್ತ ಗಮನ ಹರಿಸುವಲ್ಲಿ ಸರ್ಕಾಲ ವಿಫಲವಾಗಿದ್ದು, ಒಂದು ವರ್ಷದ ಅಧಿಕಾರಾವಧಿಯಲ್ಲಿ ಒಂದೇ ಒಂದು ಕಾಮಗಾರಿಯನ್ನು ಕೈಗೆತ್ತಿಕೊಳ್ಳದಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ ಎಂದು ಬಿಜೆಪಿ ಮುಖಂಡರೊಬ್ಬರು ಮಾಹಿತಿ ನೀಡಿದ್ದಾರೆ, ಮುಂದಿನ ದಿನಗಳಲ್ಲಿ ಈ ಸಮಸ್ಯೆಗಳ ಕುರಿತು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದೂ ಹೇಳಿದ್ದಾರೆ.