ಕೋಲಾರ, ಅಕ್ಟೋಬರ್ 30: ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ 64 ಎಕರೆ ಅರಣ್ಯ ಭೂಮಿ ಒತ್ತುವರಿ ಆರೋಪ ಕೇಳಿಬಂದಿದೆ. ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೊಸಹುಡ್ಯ ಗ್ರಾಮದ ಬಳಿ ಅರಣ್ಯ ಭೂಮಿ ಒತ್ತುವರಿ ಆರೋಪ ಕೇಳಿಬಂದಿದೆ. ಆ ಮೂಲಕ ರಮೇಶ್ ಕುಮಾರ್ಗೆ ಮತ್ತೆ ಸಂಕಷ್ಟ ಎದುರಾಗಿದೆ.
ಈ ಹಿಂದೆ ದಿವಂಗತ ಡಿ.ಕೆ.ರವಿ ಡಿಸಿ ಆಗಿದ್ದಾಗ ಜಂಟಿ ಸರ್ವೆ ಮಾಡಲಾಗಿತ್ತು. ಹಲವು ಗೊಂದಲಗಳಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಮರು ಸರ್ವೆ ಮಾಡಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಸರ್ವೆ ವೇಳೆ ಸ್ಥಳದಲ್ಲಿ ಹಾಜರಿರುವಂತೆ ರಮೇಶ್ ಕುಮಾರ್ಗೆ ಪತ್ರ ಬರೆಯಲಾಗಿತ್ತು.
ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೊಸಹುಡ್ಯ ಗ್ರಾಮದ ಬಳಿ ಅರಣ್ಯ ವಲಯದ ಜಿನಗಲಕುಂಟೆ ಗ್ರಾಮದಲ್ಲಿ 64 ಎಕರೆ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಲಾಗಿದೆ. ಸಮೀಕ್ಷೆ ಸಂಖ್ಯೆಯ ಅಡಿಯಲ್ಲಿ ಭೂಮಿಯ ಮೇಲೆ ಜಂಟಿ ಸಮೀಕ್ಷೆಯನ್ನು ನಡೆಸಬೇಕು. ಒತ್ತುವರಿ ಕಂಡುಬಂದಲ್ಲಿ, ಅದನ್ನು ತೆರವುಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು.
ರಾಜ್ಯ ಅರಣ್ಯ ಇಲಾಖೆಯ ಸಂರಕ್ಷಣಾಧಿಕಾರಿ ಶಿವಶಂಕರ್ ಸೆಂಗುಟ್ಟಿವೇಲ್ ಇತ್ತೀಚೆಗೆ ಪತ್ರ ಬರೆದಿದ್ದು, ಈ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ.