ಇವಿಎಂ ವಿಶ್ವಾಸಾರ್ಹತೆ ಸಮೀಕ್ಷಾ ವರದಿ : ಬಿಜೆಪಿ-ಕಾಂಗ್ರೆಸ್ ಕೆಸರೆರಚಾಟ

Hasiru Kranti
ಇವಿಎಂ ವಿಶ್ವಾಸಾರ್ಹತೆ ಸಮೀಕ್ಷಾ ವರದಿ : ಬಿಜೆಪಿ-ಕಾಂಗ್ರೆಸ್ ಕೆಸರೆರಚಾಟ
WhatsApp Group Join Now
Telegram Group Join Now

ಬೆಂಗಳೂರು: ಇವಿಎಂ ವಿಶ್ವಾಸಾರ್ಹತೆ ಬಗ್ಗೆ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಮಾಡಿರುವ ಸಮೀಕ್ಷೆ ಇದೀಗ ಕಾಂಗ್ರೆಸ್ ಸರ್ಕಾರವನ್ನು ತೀವ್ರ ಮುಜುಗರಕ್ಕೀಡಾಗುವಂತೆ ಮಾಡಿದೆ.  ಇದೇ ವಿಷಯ ಈಗ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ.

ಇವಿಎಂ ವಿಶ್ವಾಸಾರ್ಹತೆ ಮೇಲೆ ಮಾಡಿರುವ ಸಮೀಕ್ಷಾ ವರದಿಯನ್ನು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಬಿಜೆಪಿ ಸಮರ್ಥಿಸಿಕೊಂಡು ಕಾಂಗ್ರೆಸ್‌ ವಿರುದ್ದ ವಾಗ್ದಾಳಿ ನಡೆಸುತ್ತದ್ದಾರೆ. ಚುನಾವಣಾ ಆಯೋಗದ ಹಳೆಯ ಸಮೀಕ್ಷೆಯೊಂದನ್ನು ಬಳಸಿಕೊಂಡು ಜನರ ದಾರಿತಪ್ಪಿಸುವ ವ್ಯರ್ಥ ಪ್ರಯತ್ನ ರಾಜ್ಯದಲ್ಲಿ ವಿರೋಧ ಪಕ್ಷಗಳಿಂದ ನಡೆಯುತ್ತಿರುವುದು ವಿಷಾದನೀಯ. ಈ ಸುಳ್ಳು ಕಥನದ ವಿಶ್ವಾಸಾರ್ಹತೆಯನ್ನು ತುಸು ಆಳಕ್ಕೆ ಇಳಿದು ಪರಿಶೀಲಿಸಿದರೆ ಇದರ ಹಿಂದಿನ ದುರುದ್ದೇಶ ಸ್ಪಷ್ಟವಾಗುತ್ತದೆ  ಎಂದು ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ ನಾಯಕರು ತಿರುಗೇಟು ನೀಡುತ್ತಿದ್ದಾರೆ.

 ರಾಜ್ಯದ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಅಧೀನದಲ್ಲಿನ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ಮೈಸೂರು ಮೂಲದ ಗ್ರಾಸ್‌ರೂಟ್ಸ್ ರಿಸರ್ಚ್ ಆ್ಯಂಡ್ ಅಡ್ವೊಕಸಿ ಮೂವ್‌ಮೆಂಟ್ (ಜಿಆರ್‌ಎಎಎಂ) ಸಂಸ್ಥೆ ಮೂಲಕ 2025ರ ಮೇನಲ್ಲಿ ಇವಿಎಂ ವಿಶ್ವಾಸಾರ್ಹತೆ ಬಗ್ಗೆ ಸಮೀಕ್ಷೆ ನಡೆಸಿತ್ತು. ರಾಜ್ಯದಲ್ಲಿ ನಡೆದ ಈ ಸಮೀಕ್ಷೆಯಲ್ಲಿ ಭಾಗವಹಿಸಿದ ಜನರು ಇವಿಎಂ ಮತ ಯಂತ್ರಗಳು ನಿಖರ ಫಲಿತಾಂಶ ಕೊಡುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು.

ಇವಿಎಂ ವಂಚನೆ, ವೋಟ್ ಚೋರಿ ಬಗ್ಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ರಾಷ್ಟ್ರಾದ್ಯಂತ ಹೋರಾಟ ಮಾಡುತ್ತಿದೆ.‌ ಇದರ ಮಧ್ಯೆ ಇವಿಎಂಗಳ ಮೇಲಿನ ನಂಬಿಕೆ ಜನರಲ್ಲಿ ಹೆಚ್ಚಾಗಿದೆ ಎಂದು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಪ್ರಕಟಿಸಿರುವ ಸಮೀಕ್ಷಾ ವರದಿ, ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಮುಜುಗರವನ್ನುಂಟು ಮಾಡಿದೆ.‌

ಮೈಸೂರು ಮೂಲದ ಗ್ರಾಸ್‌ರೂಟ್ಸ್ ರಿಸರ್ಚ್ ಆ್ಯಂಡ್ ಅಡ್ವೊಕಸಿ ಮೂವ್‌ಮೆಂಟ್’ (ಜಿಆರ್‌ಎಎಎಂ) ಸಂಸ್ಥೆ ಮೂಲಕ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಮತ್ತು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಸಹಭಾಗಿತ್ವದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಇವಿಎಂಗಳು ನಿಖರ ಫಲಿತಾಂಶ ನೀಡುತ್ತವೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದ 5,100 ಜನರ ಪೈಕಿ ಶೇ.83.61ರಷ್ಟು ಜನರು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು, ಬೆಳಗಾವಿ, ಕಲಬುರಗಿ ಮತ್ತು ಮೈಸೂರು ಕಂದಾಯ ವಿಭಾಗಗಳ 102 ವಿಧಾನಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ ಕೈಗೊಳ್ಳಲಾಗಿದೆ. ಸಮೀಕ್ಷೆಯಲ್ಲಿ 5,100 ಮಂದಿ ಭಾಗಿಯಾಗಿದ್ದು. ಇದರ ಪೈಕಿ ಶೇ.83.61ರಷ್ಟು ಜನ ಇವಿಎಮ್ ಮತಯಂತ್ರಗಳ ಪರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇವಿಎಂಗಳು ನಿಖರ ಫಲಿತಾಂಶ ನೀಡುತ್ತವೆ ಎಂದು ಸಮೀಕ್ಷೆಯಲ್ಲಿ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಚುನಾವಣೆಗಳು ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಯುತ್ತವೆ ಎಂದು ಬಹುತೇಕ ಜನರು ಅಭಿಪ್ರಾಯ ವ್ಯಕ್ತಪಡಿದ್ದಾರೆ.

ಇನ್ನು ಸಮೀಕ್ಷೆಯಲ್ಲಿ ಪಾಲ್ಗೊಂಡ 5,100 ಜನರಲ್ಲಿ ಶೇ.95.75 ರಷ್ಟು ಮಂದಿ 2024ರ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದೇವೆ ಎಂದಿದ್ದಾರೆ. ಶೇ.95.44ರಷ್ಟು ಜನರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳ ವಿವರ ಸರಿಯಾಗಿವೆ ಎಂದಿದ್ದಾರೆ.  ಚುನಾವಣೆಗಳು ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಯುತ್ತವೆ ಎಂದು ಸರಾಸರಿ ಶೇ 84.55 ಜನರು ಹೇಳಿದ್ದು, ಅದರಲ್ಲೂ ಕಲಬುರಗಿ ವಿಭಾಗದಲ್ಲಿ ಅತೀ ಹೆಚ್ಚು ಅಂದರೆ ಶೇ.84.67ರಷ್ಟು ಜನರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ ಪೈಕಿ ಶೇ.10.19ರಷ್ಟು ಜನರು ಈ ಅಭಿಪ್ರಾಯವನ್ನು ಬಲವಾಗಿ ಪ್ರತಿಪಾದಿಸಿದ್ದಾರೆ.

ಬೆಳಗಾವಿ ವಿಭಾಗದ ಶೇ.69.62ರಷ್ಟು ಜನರು ಚುನಾವಣೆಗಳು ಮುಕ್ತ ಮತ್ತು ನ್ಯಾಯಯುತವಾಗಿ ನಡೆಯುತ್ತವೆ ಎಂದಿದ್ದಾರೆ. ಈ ಪೈಕಿ, ಶೇ.19.24ರಷ್ಟು ಜನರು ಈ ಅಭಿಪ್ರಾಯವನ್ನು ಬಲವಾಗಿ ಸಮರ್ಥಿಸಿದ್ದಾರೆ. ಇವಿಎಂಗಳು ನಿಖರ ಫಲಿತಾಂಶಗಳನ್ನು ನೀಡುತ್ತವೆ ಎಂದು ಶೇ.83.61ರಷ್ಟು ನಾಗರಿಕರು ನಂಬಿದ್ದಾರೆ. ಕಲಬುರಗಿ ವಿಭಾಗದಲ್ಲಿ ಈ ನಂಬಿಕೆ ಅತೀ ಹೆಚ್ಚಾಗಿದೆ. ಕಲಬುರ್ಗಿಯಲ್ಲಿ ಶೇ.83.24ರಷ್ಟು ಜನರು ಈ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಶೇ 11.24 ಜನರು ಬಲವಾಗಿ ನಿಖರ ಫಲಿತಾಂಶ ಬಗ್ಗೆ ಒಪ್ಪಿಕೊಂಡಿದ್ದಾರೆ.

ಮೈಸೂರು ವಿಭಾಗದಲ್ಲಿ ಶೇ.70.67ರಷ್ಟು ಜನರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.17.92ರಷ್ಟು ಜನರು ಬಲವಾಗಿ ಇದನ್ನು ಸಮರ್ಥಿಸಿದ್ದಾರೆ. ಅಲ್ಲದೇ, ಇವಿಎಂಗಳ ಮೇಲಿನ ನಂಬಿಕೆ 2023ರಲ್ಲಿ ಶೇ.77.90ರಷ್ಟಿದ್ದರೆ, ಈಗ ಶೇ.83.61ಕ್ಕೆ ವೃದ್ಧಿಸಿದೆ ಎಂದೂ ಈ ಸಮೀಕ್ಷೆ ಹೇಳಿದೆ. ಈ ಸಮೀಕ್ಷಾ ವರದಿಗೆ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಹಾಗೂ ಕರ್ನಾಟಕ ಸರ್ಕಾರದ ಕಾರ್ಯದರ್ಶಿ ಹಾಗೂ ಕರ್ನಾಟಕ ಮೌಲ್ಯಮಾಪನ‌ ಪ್ರಾಧಿಕಾರದ ಸಿಇಒ ಮನೋಜ್ ಜೈನ್ ಅಂಕಿತ ಹಾಕಿದ್ದಾರೆ. ಈ ಸಮೀಕ್ಷಾ ವರದಿ ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಕೆಸರೆರಚಾಟಕ್ಕೆ ಕಾರಣವಾಗಿದೆ.‌

ರಾಹುಲ್ ಗಾಂಧಿ ಮುಖಕ್ಕೆ ಮಾಡಿದ ಮಂಗಳಾರತಿ: ಇವಿಎಂ ವಿಶ್ವಾಸಾರ್ಹತೆ ಮೇಲೆ ಮಾಡಿರುವ ಸಮೀಕ್ಷಾ ವರದಿಯನ್ನು ಪ್ರತಿಪಕ್ಷ ನಾಯಕ ಆರ್.ಅಶೋಕ್ ಸಮರ್ಥಿಸಿಕೊಂಡಿದ್ದಾರೆ. ಇವಿಎಂ ಸರಿಯಿಲ್ಲ ಅಂತ ರಾಹುಲ್ ಗಾಂಧಿ ಹೇಳ್ತಿದ್ರು. ಈಗ ಸರ್ವೆಯಲ್ಲಿ ಶೇ.83 ರಷ್ಟು ಜನ ಇವಿಎಂ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದು ರಾಹುಲ್ ಗಾಂಧಿ ಮುಖಕ್ಕೆ ಮಂಗಳಾರತಿ ಮಾಡಿದಂತೆ ಅಂತ ತಿರುಗೇಟು ನೀಡಿದ್ದಾರೆ‌. ಧೈರ್ಯ ಇದ್ರೆ ಅವರು ಅಫಿಡವಿಟ್ ಸಲ್ಲಿಸಿ ದೂರು ನೀಡಲಿ, ಬರಿ ಭಾಷಣ ಮಾಡಿದ್ರೆ ಆಗಲ್ಲ. ವೋಟ್ ಚೋರಿ ಎಲ್ಲಿ ಆಗುತ್ತಿತ್ತು. ಕಾಂಗ್ರೆಸ್ ಪಾರ್ಟಿಯೊಳಗೆ ಆಗುತ್ತಿತ್ತು. ಈಗ ಪಕ್ಷದೊಳಗೆ ಬೆಂಕಿ ಉರಿಯುತ್ತಿದೆ ಎಂದು ಟೀಕಿಸಿದರು.

ಮೋದಿ ಭಕ್ತರು ಮಾಡಿದ ಸರ್ವೆ ಇದು: ಇತ್ತ ಸಮೀಕ್ಷೆ ಸಂಬಂಧ ಸುದ್ದಿಗೋಷ್ಟಿ ನಡೆಸಿದ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್, ಈಗ ಇವಿಎಂಗಳ ಸರ್ವೆ ಮಾಡುವ ಅವಶ್ಯಕತೆ ಏನಿತ್ತು?. ರಾಹುಲ್ ಗಾಂಧಿ ವೋಟ್ ಚೋರಿ ಅಭಿಯಾನ ದೇಶದ ಜನರ ಗಮನಸೆಳೆದಿತ್ತು. ಇವಿಎಂಗಳು ಒರಿಜಿನಲ್ ಅಂತ ಸಾಬೀತು ಮಾಡಿ ಬಿಂಬಿಸೋಕೆ ಈ ಸರ್ವೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಸರ್ವೆ ಮಾಡಿರೋದು‌ ಮೈಸೂರು ಮೂಲದ ಸಂಸ್ಥೆ. ಚುನಾವಣಾ ಆಯೋಗದ ಜೊತೆ ಸಹಭಾಗಿತ್ವ ಹೊಂದಿರುವ ಸಂಸ್ಥೆ. ಪ್ರಧಾನಿ ಮೋದಿಯವರ ಬಗ್ಗೆ ಮೋದಿಮಾಲಾ ಎಂಬ ಬುಕ್ ಬರೆದಿದ್ದ ಲೇಖಕರು ಈ ಸಂಸ್ಥೆಯ ಮುಖ್ಯಸ್ಥರು. ಪ್ರಧಾನಿ ಕಚೇರಿಯಲ್ಲಿ ಕೆಲಸ ಮಾಡುವ ಇವರು ಇನ್ಯಾವ ಮಾನದಂಡದ ಮೇಲೆ ಸರ್ವೆ ಮಾಡಿದ್ದಾರೆ ಗೊತ್ತಿಲ್ಲ ಎಂದು ಆರೋಪಿಸಿದ್ದಾರೆ.

ರಾಜ್ಯದ 102 ವಿಧಾನಸಭಾ ಕ್ಷೇತ್ರಗಳಿಂದ 5,100 ಜನಾಭಿಪ್ರಾಯ ಸಂಗ್ರಹಿಸಿದ್ದಾರೆ. ರಾಜ್ಯದ 7 ಕೋಟಿ ಜನರ ಅಭಿಪ್ರಾಯ ಇದು ಆಗುತ್ತಾ?. ಚುನಾವಣಾ ಆಯೋಗ ತಾನು ಸರಿಯಾಗಿದ್ದೇನೆ ಎಂದು ಬಿಂಬಿಸಿಕೊಳ್ಳೋಕೆ ಈ ಪ್ರಯತ್ನ ಮಾಡಿದೆ. ಮೋದಿ ಹೊಗಳು ಭಟ್ಟರು ಮಾಡಿರುವ ಸಮೀಕ್ಷೆ ಇದು. ಇದನ್ನ ಹೇಗೆ ನಂಬೋಕೆ ಸಾಧ್ಯ ಹೇಳಿ?. ನಾಗಪುರ ಯೂನಿವರ್ಸಿಟಿ ಸರ್ವೆ ಇದು ಎಂದು ದೂರಿದ್ದಾರೆ.

 ರಾಹುಲ್‌ ಗಾಂಧಿ ಅವರು ಪ್ರಜಾಪ್ರಭುತ್ವವನ್ನಾಗಲಿ, ಚುನಾವಣೆಯನ್ನಾಗಲಿ ಪ್ರಶ್ನಿಸಿಲ್ಲ. ಅವರು ಚುನಾವಣಾ ಆಯೋಗ ಪಾರದರ್ಶಕವಾಗಿ ತಯಾರಿಸಿರುವ ಮತದಾರರ ಪಟ್ಟಿ ಮತ್ತು ಮತಗಟ್ಟೆಗಳ ಸಿಸಿಟಿವಿ ದೃಶ್ಯಗಳನ್ನು ಕೇಳಿದ್ದಾರೆ. ಇವಿಎಂನ ಕಾರ್ಯವೈಖರಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯುಕ್ತರನ್ನು ನೇಮಕಗೊಳಿಸುವ ಪ್ರಕ್ರಿಯೆ ಬಗ್ಗೆ ಪ್ರಶ್ನಿಸಿದ್ದಾರೆ. ಆದರೆ ಈ ಯಾವ ಪ್ರಶ್ನೆಗಳಿಗೂ ಚುನಾವಣಾ ಆಯೋಗ ಸಮಂಜಸ ಉತ್ತರ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ.

ಚುನಾವಣಾ ಆಯೋಗ ದುರುದ್ದೇಶದಿಂದ ಸಂಶಯಾಸ್ಪದ ಸಂಸ್ಥೆಯ ಮೂಲಕ ನಡೆಸಿರುವ ದೋಷಪೂರಿತ ಸಮೀಕ್ಷೆಯ ವರದಿಯನ್ನು ಬಳಸಿಕೊಂಡು ನಂತರದ ದಿನಗಳಲ್ಲಿ ರಾಹುಲ್ ಗಾಂಧಿಯವರು ಪತ್ರಿಕಾಗೋಷ್ಠಿಯಲ್ಲಿ ಮಾಡಿರುವ ಆರೋಪಗಳನ್ನು ಮುಚ್ಚಿಹಾಕಲು ಸಾಧ್ಯ ಇಲ್ಲ ಎನ್ನುವುದನ್ನು ಭಾರತೀಯ ಜನತಾ ಪಕ್ಷ ಅರ್ಥಮಾಡಿಕೊಳ್ಳಬೇಕು. ಮೇಲ್ನೋಟದಲ್ಲಿಯೇ ಸ್ಪಷ್ಟವಾಗಿ ಕಾಣುವಂತೆ, ರಾಜಕೀಯ ದುರುದ್ದೇಶದಿಂದಲೇ ಮಾಡಲಾಗಿರುವ ಸಮೀಕ್ಷೆಯ ಒಳ-ಹೊರಗನ್ನು ಸೂಕ್ಷ್ಮವಾಗಿ ಪರಿಶೀಲಿಸದೆ, ಅದರ ಗುಪ್ತ ಅಜೆಂಡಾವನ್ನು ಅರ್ಥಮಾಡಿಕೊಳ್ಳದೆ, ಆ ವರದಿಯ ಕೆಲವು ಭಾಗಗಳನ್ನಷ್ಟೇ ಹೆಕ್ಕಿ ತೆಗೆದು ಮಾಧ್ಯಮಗಳು ವರದಿ ಮಾಡಿರುವುದು ಅತ್ಯಂತ ದುರದೃಷ್ಟಕರ ಎಂದು ಸಿಎಂ ಬರೆದುಕೊಂಡಿದ್ದಾರೆ.

WhatsApp Group Join Now
Telegram Group Join Now
Share This Article