ಬೆಂಗಳೂರು,15: ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಇಂದು ಭಾರತಕ್ಕೆ ಮರಳುವ ನಿರೀಕ್ಷೆ ಹುಸಿಯಾಗಿದೆ. ಜರ್ಮನಿಯ ಮ್ಯೂನಿಕ್‌ನಿಂದ ಭಾರತಕ್ಕೆ ಮರಳುವ ವಿಮಾನ ಟೇಕಾಫ್ ಆಗಿದ್ದು, ಪ್ರಜ್ವಲ್ ಬೋರ್ಡಿಂಗ್ ಆಗಿಲ್ಲ ಎಂಬ ಮಾಹಿತಿ ಲಭಿಸಿದೆ.
ವಿಚಾರಣೆಗೆ ಹಾಜರಾಗುವ ಸಲುವಾಗಿ ಪ್ರಜ್ವಲ್ ರೇವಣ್ಣ ಕಾಲಾವಕಾಶ ಕೇಳಿದ್ದರು. ಅಲ್ಲದೇ ಲುಫ್ತಾನ್ಸಾ ವಿಮಾನದಲ್ಲಿ ಇಂದಿಗೆ ಬಿಸಿನೆಸ್ ಕ್ಲಾಸ್ ರಿಟರ್ನ್ ಟಿಕೆಟ್ ಕೂಡಾ ಬುಕ್ ಮಾಡಿದ್ದರು. ಆದರೆ ಇದೀಗ ವಿಮಾನ ಮ್ಯೂನಿಕ್ ನಗರದಿಂದ ಟೇಕಾಫ್ ಆಗಿದ್ದು, ಪ್ರಜ್ವಲ್ ಇಂದು ಬೆಂಗಳೂರಿಗೆ ಮರಳುವುದಿಲ್ಲ ಎಂಬ ಮಾಹಿತಿಯನ್ನು ಎಸ್‌ಐಟಿ ಅಧಿಕಾರಿಗಳು ಖಚಿತಪಡಿಸಿಕೊಂಡಿದ್ದಾರೆ.
ಪ್ರಜ್ವಲ್ ಬರಲ್ಲ ಎಂಬ ವಿಚಾರವನ್ನು ವಿಮಾನ ನಿಲ್ದಾಣ ಅಧಿಕಾರಿಗಳ ಮೂಲಗಳಿಂದ ಎಸ್‌ಐಟಿ ಅಧಿಕಾರಿಗಳು ಕನ್ಫರ್ಮ್ ಮಾಡಿಕೊಂಡಿದ್ದಾರೆ. ಅಲ್ಲದೇ ವಿಮಾನ ಟೇಕಾಫ್ ಆಗುತ್ತಿದ್ದಂತೆ ಪ್ರಯಾಣಿಕರ ಲಿಸ್ಟ್ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಧಿಕಾರಿಗಳ ಕೈ ಸೇರಿದೆ.
ಈ ಲಿಸ್ಟ್‌ನಲ್ಲಿ ಪ್ರಜ್ವಲ್ ಹೆಸರಿಲ್ಲದ್ದರಿಂದ ಪ್ರಜ್ವಲ್ ಇಂದು ಭಾರತಕ್ಕೆ ಆಗಮಿಸುವುದಿಲ್ಲ ಎಂಬುದನ್ನು ವಿಮಾನ ನಿಲ್ದಾಣ ಅಧಿಕಾರಿಗಳು ಖಚಿತಪಡಿಸಿಕೊಂಡು ಎಸ್‌ಐಟಿ ಅಧಿಕಾರಿಗಳಿಗೂ ಮಾಹಿತಿ ರವಾನಿಸಿದ್ದಾರೆ. ಬೆಳಗ್ಗೆಯಿಂದಲೂ ವಿಮಾನ ನಿಲ್ದಾಣ ಅಧಿಕಾರಿಗಳ ಜೊತೆ ಎಸ್‌ಐಟಿ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದರು.