ರಾಯಬಾಗ: ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಹಿಂದುಳಿದ ಮಾಳಿ ಸಮಾಜಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸುವ ಪ್ರಸ್ತಾವನೆಯನ್ನು ಬೆಂಗಳೂರಿನಲ್ಲಿ ನಡೆದ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದ ಶಾಸಕ ಡಿ.ಎಮ್.ಐಹೊಳೆಯವರನ್ನು ಸಮಾಜದ ಪರವಾಗಿ ಅಭಿನಂದಿಸುವುದಾಗಿ ಮಾಳಿ ಸಮಾಜದ ರಾಜ್ಯ ನಿಯೋಗದ ಅಧ್ಯಕ್ಷ ಡಾ.ಸಿ.ಬಿ.ಕುಲಗುಡ ಹೇಳಿದರು.
ಮಂಗಳವಾರ ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ಮಾಳಿ ಸಮಾಜದಿಂದ ಶಾಸಕ ದುರ್ಯೋಧನ ಐಹೊಳೆಯವರನ್ನು ಸತ್ಕರಿಸಿ ಮಾತನಾಡಿದ ಅವರು, ತಾಲೂಕಿನ ಮುಗಳಖೋಡದಲ್ಲಿ 2023 ರಲ್ಲಿ ನಡೆದ ರಾಜ್ಯಮಟ್ಟದ ಮಾಳಿ ಸಮಾಜದ ಸಭೆಯಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಳಿ, ಮಾಲಗಾರ ಸಮಾಜಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸುವುದಾಗಿ ಭರವಸೆ ನೀಡಿದ್ದರು. ಆದರೆ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ ಸರ್ಕಾರ ಇನ್ನುವರೆಗೂ ಮಾಳಿ ನಿಗಮ ರಚನೆ ಮಾಡುವುದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಇದು ಮಾಳಿ ಸಮಾಜಕ್ಕೆ ಬೇಸರ ಮೂಡಿಸಿದೆ. ಈಗ ನಮ್ಮ ಶಾಸಕರಾದ ಐಹೊಳೆಯವರು ಅಧಿವೇಶನದಲ್ಲಿ ಮಾಳಿ ಸಮಾಜಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸುವ ಬಗ್ಗೆ ಸರ್ಕಾರದ ಗಮನ ಸೆಳೆದಿರುವುದು ಅತ್ಯಂತ ಸಂತೋಷ ತಂದಿದೆ ಎಂದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಶಾಸಕ ಡಿ.ಎಮ್. ಐಹೊಳೆಯವರು, ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಮತ್ತೆ ವಿಧಾನಸಭೆಯಲ್ಲಿ ಮಾಳಿ ಸಮಾಜಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸಲು ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದರು. ಇದಕ್ಕೆ ಮಾಳಿ ಸಮಾಜದವರು ಇನ್ನು ಹೆಚ್ಚಿನ ಬೆಂಬಲ ನೀಡಬೇಕೆಂದರು.
ಕೌಜಲಗಿ ಮಾಳಿ ಸಮಾಜದ ಮುಖಂಡ ನೀಲಪ್ಪ ಕಿವಟಿ ಮಾತನಾಡಿ, ರಾಜ್ಯ ಸರ್ಕಾರ ಶೀಘ್ರವಾಗಿ ಮಾಳಿ ಸಮಾಜಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸದಿದ್ದರೆ, ಬೆಳಗಾವಿಯಲ್ಲಿ ನಡೆಯುವ ಅಧೀವೇಶನದಲ್ಲಿ ಉಪವಾಸ ಸತ್ಯಾಗ್ರಹದೊಂದಿಗೆ ಉಗ್ರ ಹೋರಾಟ ನಡೆಸುವುದಾಗಿ ಹೇಳಿದರು.
ಮುಖಂಡರಾದ ವಸಂತ ಹೊಸಮನಿ, ಶ್ರೀಧರ ಕಿಚಡೆ ಮಾತನಾಡಿದರು.
ಗೋವಿಂದ ಕುಲಗುಡೆ, ಅಣ್ಣಾಸಾಹೇಬ ಕುಲಗುಡೆ, ಪಿ.ಎಮ್.ಕುಲಗುಡ, ಬಸವರಾಜ ಮೇತ್ರಿ, ಅಜ್ಜಪ್ಪ ಕುಲಗುಡೆ, ಮಹಾದೇವ ಹೊಸಮನಿ, ಸುರೇಶ ಮಾಳಿ, ಡಾ.ಮಹಾಂತೇಶ ನಿಲೂರ, ರಾಜು ಮೇತ್ರಿ, ಭೀಮಪ್ಪ ಖಿಚಡೆ, ಉಮೇಶ ಮೇತ್ರಿ, ಬಾಳು ಕಳಸೆ ಹಾಗೂ ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯ ಮಾಳಿ ಸಮಾಜದ ಬಾಂಧವರು ಇದ್ದರು.
ಫೋಟೊ: 26 ರಾಯಬಾಗ 4
ಫೋಟೊ ಶೀರ್ಷಿಕೆ: ರಾಯಬಾಗ: ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ಮಾಳಿ ಸಮಾಜದವರು ಶಾಸಕ ದುರ್ಯೋಧನ ಐಹೊಳೆಯವರನ್ನು ಸತ್ಕರಿಸಿದರು.