ಬೆಂಗಳೂರು, ಸೆ.27: ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಕಗ್ಗಲಿ ಕಾವಲು ಪ್ರದೇಶದ ಸರ್ವೆ ನಂ.1ರಿಂದ 22ರವರೆಗಿನ 301.07 ಎಕರೆ ಕಿರು ಅರಣ್ಯ ಭೂಮಿಯನ್ನು ನ್ಯಾಯಾಲಯದ ಆದೇಶದಂತೆ ಮರಳಿ ವಶಕ್ಕೆ ಪಡೆಯುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.
ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ರಾಮಕೃಷ್ಣೇಗೌಡ ಎಂಬುವವರು 2000ದಲ್ಲಿ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಡಬ್ಲ್ಯು.ಪಿ. 11835/2000)ಗೆ ಸಂಬಂಧಿಸಿದಂತೆ ಕೋರ್ಟ್ 2009ರಲ್ಲಿಯೇ ಎಲ್ಲ ಅನಧಿಕೃತ ಮಂಜೂರಾತಿಯನ್ನು ರದ್ದು ಮಾಡಿಸಿ, ಭೂಮಿಯನ್ನು ಯಥಾವತ್ ಅರಣ್ಯವಾಗಿ ಉಳಿಸಲು ತೀರ್ಪಿತ್ತಿದ್ದರೂ ಕ್ರಮ ವಹಿಸದ ಕಾನೂನು ವಿಭಾಗದ ಎಲ್ಲ ಎಪಿಸಿಸಿಎಫ್ ಗಳು ಮತ್ತು ಹಾಸನ ಡಿಸಿಎಫ್ ಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ನೀಡಿರುವ ಟಿಪ್ಪಣಿಯಲ್ಲಿ ಸಚಿವರು ಸದರಿ ಜಮೀನನ್ನು ವಶಕ್ಕೆ ಪಡೆಯಲು ಕ್ರಮ ವಹಿಸಲು ಮತ್ತು ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪ ಎಸಗಿರುವ ಎಲ್ಲ ಎಪಿಸಿಸಿಎಫ್ ಗಳು ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿ ಕ್ರಮ ಜರುಗಿಸುವಂತೆ ಸೂಚಿಸಿದ್ದಾರೆ.
1940ರ ಜನವರಿ 15ರಂದು ಚನ್ನರಾಯಪಟ್ಟಣ ತಾಲೂಕು ಕಗ್ಗಲಿ ಕಾಲು ಪ್ರದೇಶವನ್ನು ಕಿರು ಅರಣ್ಯ ಎಂದು ಅಂದಿನ ಮಹಾರಾಜರ ಆಳ್ವಿಕೆಯಲ್ಲಿ ಘೋಷಣೆ ಮಾಡಲಾಗಿತ್ತು. ಆದರೆ ಸದರಿ ಕಿರು ಅರಣ್ಯ ಜಮೀನನ್ನು ಅಕ್ರಮವಾಗಿ ದರಕಾಸ್ತು ಮಂಜೂರು ಮಾಡಲಾಗಿತ್ತು. ಈ ವಿರುದ್ಧ ರಾಮಕೃಷ್ಣೇಗೌಡ ಬಿನ್ ಏರೇಗೌಡ ಅವರು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅಂದಿನ ಮುಖ್ಯ ನ್ಯಾಯಮೂರ್ತಿ ಪಿ.ಡಿ. ದಿನಕರನ್ ಮತ್ತು ಮೋಹನ ಶಾಂತನಗೌಡರ್ ಅವರಿದ್ದ ವಿಭಾಗೀಯ ಪೀಠ 2009ರ ನವೆಂಬರ್ 6ರಂದು ಎಲ್ಲಾ ದರಕಾಸ್ತು ಮಂಜೂರಾತಿಗಳನ್ನು ರದ್ದು ಮಾಡಿ ಕಗ್ಗಲಿ ಕಾವಲು ಸರ್ವೆ ನಂ.1ರಿಂದ 22ರವರೆಗಿನ 331.07 ಎಕರೆ ಪ್ರದೇಶವನ್ನು ಯಥಾವತ್ ಅರಣ್ಯವಾಗಿ ಉಳಿಸುವಂತೆ ಆದೇಶ ನೀಡಿತ್ತು. ಬಳಿಕ ಹಾಸನ ಜಿಲ್ಲೆಯ ಕೆಲವು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಚನ್ನರಾಯಪಟ್ಟಣ ತಹಶೀಲ್ದಾರರಿಗೆ ಪತ್ರ ಬರೆದಿರುವುದನ್ನು ಬಿಟ್ಟರೆ ಈ ಭೂಮಿಯನ್ನು ಮರಳಿ ವಶಕ್ಕೆ ಪಡೆದು ಅರಣ್ಯ ಬೆಳೆಸುವ ಪ್ರಯತ್ನವನ್ನೇ ಮಾಡದಿರುವ ಬಗ್ಗೆ ಅರಣ್ಯ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.