ಸರ್ಕಾರಿ ವಸತಿ ನಿಲಯಗಳು ಪ್ರಾರ್ಥನಾ ಕೇಂದ್ರಗಳಿದಂತೆ, ಶೃದ್ಧೆಯಿಂದ ಕಲಿತು ಸರ್ಕಾರಿ ನೌಕರರಾಗಿ-ಇಒ ಚಂದ್ರಶೇಖರ್ ಕಂದಕೂರು ಅಭಿಮತ
ವಸತಿ ನಿಲಯದ ಕಿರಿಯ ವಿದ್ಯಾರ್ಥಿಗಳಿಗೆ ಓದು, ಗುಣ, ಚಾರಿತ್ರ್ಯದಲ್ಲಿ ಹಿರಿಯ ವಿದ್ಯಾರ್ಥಿಗಳು ಮಾದರಿಯಾಗುವಂತೆ ಸೂಚನೆ
ಗಜೇಂದ್ರಗಡ: ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ ಬಿ, ಕಂದಕೂರ ಅವರು ಸೋಮವಾರ ತಡರಾತ್ರಿ ನಗರದ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಿಸಿಎಂ ಬಾಲಕರ ವಸತಿ ನಿಲಯಗಳಿಗೆ ಭೇಟಿ ನೀಡಿದರು.
ಬಸವರಾಜ ಬಡಿಗೇರ ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ತಾಪಂ ಗಜೇಂದ್ರಗಡ ಅವರ ಜೊತೆಗೂಡಿ ವಸತಿ ನಿಲಯಗಳಿಗೆ ಭೇಟಿ ನೀಡಿದ ಇಒ ಅವರು, ವಸತಿ ನಿಲಯಗಳ ಸ್ವಚ್ಛತೆ, ಊಟದ ವ್ಯವಸ್ಥೆ, ವಸತಿ ನಿಲಯಗಳಲ್ಲಿ ಮೂಲಭೂತ ಅವಶ್ಯಕತೆಗಳ ಪೂರೈಕೆಗಳ ಬಗ್ಗೆ ವಸತಿ ನಿಲಯದ ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿ ಮಾಹಿತಿ ಪಡೆದರು.
ಬಿಸಿಎಂ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಕಲಿಕೆಯ ಅನುಕೂಲತೆಗೆ ರಾಜ್ಯ ಸರ್ಕಾರ ಸಕಲ ಸೌಕರ್ಯಗಳನ್ನು ಒದಗಿಸಿದೆ. ಸರ್ಕಾರದ ಈ ಅನುಕೂಲತೆಯನ್ನು ಸದುಪಯೋಗಪಡಿಸಿಕೊಂಡು ಮುಂದೆ ಬರುವ ವಿದ್ಯಾರ್ಥಿಗಳಿಗೂ ಒದಗಿಸಿಕೊಡುವ ಕೆಲಸವನ್ನು ವಸತಿ ನಿಲಯದ ವಿದ್ಯಾರ್ಥಿಗಳು ಮಾಡಬೇಕು. ವಿದ್ಯಾರ್ಥಿಗಳಾಗಿದ್ದ ವೇಳೆ ನಮಗೆಲ್ಲ ಇಂತಹ ಯಾವುದೇ ಸೌಲಭ್ಯಗಳಿರಲಿಲ್ಲ. ಇಂದು ನಿಮಗೆ ಸಕಲ ರೀತಿಯ ಸೌಲಭ್ಯಗಳಿರುವಾಗ ಓದಿನಲ್ಲಿ ಹಿಂದೆ ಬೀಳದೆ ವಸತಿ ನಿಲಯಗಳನ್ನು ಪ್ರಾರ್ಥನಾ ಕೇಂದ್ರಗಳೆಂದು ಭಾವಿಸಿ ಭಕ್ತಿಯಿಂದ ಓದಿನಲ್ಲಿ ತೊಡಗಿಕೊಂಡು ಸರ್ಕಾರದ ಉನ್ನತ ಹುದ್ದೆ ಪಡೆದುಕೊಳ್ಳಿ ಅಂತ ಇಒ ಕಂದಕೂರು ಅವರು ವಸತಿ ನಿಲಯದ ವಿದ್ಯಾರ್ಥಿಗಳಿಗೆ ಬುದ್ಧಿಮಾತು ಹೇಳಿದರು.
ಸ್ವತಃ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಅನುಭವವುಳ್ಳ ಇಒ ಅವರು ಮೆಟ್ರಿಕ್ ಪೂರ್ವ ವಸತಿ ನಿಲಯದ ಮಕ್ಕಳಿಗೆ ಯಾವುದೇ ವಿಷಯ ಕಠಿಣವೆನಿಸಿದರೂ ದೂರವಾಣಿ ಕರೆ ಮಾಡಿದರೆ ಆ ವಿಷಯದ ಕುರಿತು ಪಾಠ ಮಾಡುವುದಾಗಿ ವಸತಿ ನಿಲಯದ ಮಕ್ಕಳಿಗೆ ಓದಿನಲ್ಲಿ ತೊಡಗುವಂತೆ ಪ್ರೇರೆಪಿಸಿದರು. ಪ್ರತಿಯೊಂದು ನಿಲಯದ ಕೊಠಡಿಗೆ ತೆರಳಿ ಕೊಠಡಿಯ ಸ್ವಚ್ಛತೆ, ಬೆಡ್ ಮತ್ತು ಕಾಟ್ ವ್ಯವಸ್ಥೆ ಪರಿಶೀಲಿಸಿದರು.
ಇದೇ ವೇಳೆ ಇಒ ಕಂದಕೂರು ಅವರಿಗೆ ವಸತಿ ನಿಲಯದ ವಿದ್ಯಾರ್ಥಿಗಳು ಹಾಸ್ಟೇಲ್ಗೆ ಬರುವ ರಸ್ತೆ ಹದಗೆಟ್ಟಿದ್ದು, ದುರಸ್ಥಿಗೊಳಿಸುವಂತೆ ಮನವಿ ಮಾಡಿದರು. ಅಲ್ಲದೆ ಸದ್ಯ ಹಾಸ್ಟೇಲ್ ನ ಸ್ನಾನದ ಕೊಠಡಿಯಲ್ಲಿ ಬಟ್ಟೆ ತೊಳೆದುಕೊಳ್ಳುತ್ತಿದ್ದು ಪ್ರತ್ಯೇಕವಾಗಿ ಬಟ್ಟೆ ತೊಳೆದಕೊಳ್ಳು ಕೊಠಡಿ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು.