ಬೆಂಗಳೂರು: ಸಾರಿಗೆ ನೌಕರರು ಆಗಸ್ಟ್ 5 ರಂದು ಬೆಳಿಗ್ಗೆಯಿಂದ ಸಾವಿರಾರು ಬಸ್ಗಳ ಸಂಚಾರ ನಿಲ್ಲಿಸಿ ಮುಷ್ಕರಕ್ಕೆ ಮುಂದಾಗಿದ್ದರು. ಮುಷ್ಕರವನ್ನು ಕೈಬಿಡಬೇಕೆಂದು ಹೈಕೋರ್ಟ್ ಆದೇಶ ನೀಡಿತ್ತು. ಈ ಹಿನ್ನೆಲೆ ಸಾರಿಗೆ ನೌಕರರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆದರೆ, ಯಾರೆಲ್ಲ ಮುಷ್ಕರದಲ್ಲಿ ಭಾಗಿಯಾಗಿದ್ದರೋ, ಅಂತಹ ಸಾವಿರಾರು ನೌಕರರಿಗೆ ಸಾರಿಗೆ ನಿಗಮಗಳು ವಾಟ್ಸ್ಆ್ಯಪ್ ಮೂಲಕ ನೋಟಿಸ್ ನೀಡಿವೆ. ಮುಷ್ಕರದಲ್ಲಿ ಭಾಗಿಯಾಗಿದ್ದವರ ಮೇಲೆ ಸರ್ಕಾರ ನೋಟಿಸ್ ನೀಡಿ ಅಮಾನತು ಮತ್ತು ವಜಾಗೊಳಿಸಲು ಮುಂದಾಗಿದ್ದು, ಇದಕ್ಕೆ ಸಾರಿಗೆ ಮುಖಂಡರು ಕೆಂಡಾಮಂಡಲರಾಗಿದ್ದಾರೆ.
ನೌಕರರ 38 ತಿಂಗಳ ವೇತನ ಹಿಂಬಾಕಿ ನೀಡಬೇಕು, 01-01-2024 ರಿಂದ ವೇತನ ಪರಿಷ್ಕರಣೆ ಮಾಡಬೇಕೆಂದು ಆಗ್ರಹಿಸಿ ಆಗಸ್ಟ್ 5 ರಿಂದ ಮುಷ್ಕರ ಮಾಡುತ್ತೇವೆಂದು ಮುಖ್ಯಮಂತ್ರಿಗಳಿಗೆ ಜುಲೈ 16 ರಂದು ನೋಟಿಸ್ ನೀಡಿದ್ದರು. ಈ ಹಿನ್ನೆಲೆ ಸಿಎಂ ಆಗಸ್ಟ್ 4 ರಂದು ಮುಖಂಡರ ಸಭೆ ಕರೆದಿದ್ದರು. ಸಭೆಯಲ್ಲಿ ಸಿಎಂ, ‘38 ತಿಂಗಳ ಬದಲಿಗೆ 14 ತಿಂಗಳ ಅರಿಯರ್ಸ್ ಕೊಡುತ್ತೇವೆ, ವೇತನ ಪರಿಷ್ಕರಣೆ ಬಗ್ಗೆ ಮುಂದೆ ಚರ್ಚೆ ಮಾಡೋಣ’ ಎಂದಿದ್ದರು
ಮುಷ್ಕರದಲ್ಲಿ ಭಾಗಿಯಾದ ಸಾರಿಗೆ ನೌಕರರನ್ನು ಆಗಸ್ಟ್ 7 ರಿಂದ ಅಮಾನತು ಮತ್ತು ವಜಾಗೊಳಿಸಲು ಪಟ್ಟಿ ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ. ನೋಟಿಸ್ ನೀಡುತ್ತಿರುವ ಪ್ರತಿಕ್ರಿಯಿಸಿದ ಸಾರಿಗೆ ನೌಕರರ ಮುಖಂಡ ಜಗದೀಶ್, ನೋಟಿಸ್ ವಾಪಸ್ ಪಡೆಯಬೇಕು, ಇಲ್ಲಾಂದರೆ ಪ್ರತಿ ಡಿಪೋ ಮುಂದೆ ಪ್ರತಿಭಟನೆ ಮಾಡಿ ಡಿಪೋ ಬಂದ್ ಮಾಡುತ್ತೇವೆ. ಸರ್ಕಾರ ನಮ್ಮನ್ನು ಕರೆದು ಸಂಬಳ ಕೊಡಬೇಕು, ಇಲ್ಲಾಂದರೆ ಮತ್ತೆ ಸಾರಿಗೆ ಸ್ತಬ್ದವಾಗುತ್ತದೆ. ರಾಜ್ಯದ ಮೂಲೆ ಮೂಲೆಯಲ್ಲಿರುವ ನೌಕರರ ಪರವಾಗಿ ನಿಲುತ್ತೇವೆ. ಇಂತಹದಕ್ಕೆ ಜಂಟಿ ಕ್ರಿಯಾ ಸಮಿತಿ ಬಗ್ಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.