ಬೆಂಗಳೂರು, ಸೆಪ್ಟೆಂಬರ್ 19: ಕಲಬುರಗಿಯ ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂಬ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಆರೋಪಕ್ಕೆ ಚುನಾವಣಾ ಆಯೋಗ ಅಂಕಿಅಂಶಗಳ ಸಮೇತ ಸ್ಪಷ್ಟನೆ ನೀಡಿದೆ. ನಿಜವಾಗಿ 2023ರಲ್ಲಿ ಏನು ನಡೆದಿತ್ತು? ಮತದಾರರ ಹೆಸರನ್ನು ಡಿಲೀಟ್ ಮಾಡುವ ಸಂಬಂಧ ಎಷ್ಟು ಅರ್ಜಿಗಳು ಬಂದಿದ್ದವು? ತನಿಖಾ ತಂಡಕ್ಕೆ ಏನೇನು ಮಾಹಿತಿ ನೀಡಲಾಗಿತ್ತು ಎಂಬ ಎಲ್ಲ ವಿವರಗಳನ್ನು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ಬಿಡುಗಡೆ ಮಾಡಿದೆ. 2023 ರ ಫೆಬ್ರವರಿ 21 ರಂದು ಕ್ಷೇತ್ರ ಚುನಾವಣಾ ನೋಂದಣಾಧಿಕಾರಿ ಎಫ್‌ಐಆರ್ ದಾಖಲಿಸಿದ್ದರು. ಫಾರ್ಮ್ 7 ದುರುಪಯೋಗ ಮಾಡಲಾಗುತ್ತಿದೆ ಎಂಬ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು ಎಂದು ಚುನಾವಣಾ ಆಯೋಗ ತಿಳಿಸಿದೆ.
ಆ ಅರ್ಜಿಗಳನ್ನು ತಕ್ಷಣವೇ ಡಿಲೀಟ್ ಮಾಡಿರಲಿಲ್ಲ. ಬದಲಾಗಿ ದೂರು ದಾಖಲಿಸಿ ತನಿಖೆಗೆ ಮುಂದಾಗಿದ್ದೆವು. 2023 ರ ಸೆಪ್ಟೆಂಬರ್ 6 ರಂದು ಕರ್ನಾಟಕ ಮುಖ್ಯ ಚುನಾವಣಾ ಆಯುಕ್ತರು ಲಭ್ಯವಿದ್ದ ಎಲ್ಲಾ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದರು ಮತ್ತು ನಂತರ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹಸ್ತಾಂತರಿಸಿದ್ದರು ಎಂದು ಆಯೋಗ ತಿಳಿಸಿದೆ.