ಮುಸ್ಲಿಂ ಮೀಸಲಾತಿ ಕುರಿತ ಬಿಜೆಪಿಯ ಅನಿಮೇಟೆಡ್ ವಿಡಿಯೋವನ್ನು ತೆಗೆದುಹಾಕಿ: ಎಕ್ಸ್ ಗೆ ಚುನಾವಣಾ ಆಯೋಗ ಆದೇಶ

Ravi Talawar
ಮುಸ್ಲಿಂ ಮೀಸಲಾತಿ ಕುರಿತ ಬಿಜೆಪಿಯ ಅನಿಮೇಟೆಡ್ ವಿಡಿಯೋವನ್ನು ತೆಗೆದುಹಾಕಿ: ಎಕ್ಸ್ ಗೆ ಚುನಾವಣಾ ಆಯೋಗ ಆದೇಶ
WhatsApp Group Join Now
Telegram Group Join Now

ನವದೆಹಲಿ,07: ಮುಸ್ಲಿಂ ಸಮುದಾಯದ ಮೀಸಲಾತಿಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಕರ್ನಾಟಕ ಘಟಕ ಹಂಚಿಕೊಂಡಿರುವ ಅನಿಮೇಟೆಡ್ ಕಾರ್ಟೂನ್ ವಿಡಿಯೋವನ್ನು ‘ತಕ್ಷಣ’ ತೆಗೆದುಹಾಕುವಂತೆ ಕೇಂದ್ರ ಚುನಾವಣಾ ಆಯೋಗ ಮಂಗಳವಾರ ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ ಗೆ ನಿರ್ದೇಶನ ನೀಡಿದೆ.

ಈ ಸಂಬಂಧ ‘X’ ನ ನೋಡಲ್ ಅಧಿಕಾರಿಗೆ ಬರೆದ ಪತ್ರದಲ್ಲಿ, ಕರ್ನಾಟಕ ಬಿಜೆಪಿ ಘಟಕ ಮಾಡಿರುವ ಪೋಸ್ಟ್ ಅಸ್ತಿತ್ವದಲ್ಲಿರುವ ಕಾನೂನು ಚೌಕಟ್ಟನ್ನು ಉಲ್ಲಂಘಿಸುತ್ತದೆ. ಆದ್ದರಿಂದ ಈ ಪೋಸ್ಟ್ ಅನ್ನು ತಕ್ಷಣ ತೆಗೆದುಹಾಕುವಂತೆ ಚುನಾವಣಾ ಆಯೋಗ, ಎಕ್ಸ್ ಗೆ ನಿರ್ದೇಶನ ನೀಡಿದೆ.

ಪತ್ರದ ಜೊತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ವಿರುದ್ಧ ಈಗಾಗಲೇ ದಾಖಲಾಗಿರುವ ಎಫ್ಐಆರ್ ಪ್ರತಿಯನ್ನು ಸಹ ಚುನಾವಣಾ ಆಯೋಗ ಲಗತ್ತಿಸಿದೆ.

ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಈ ಸಂಬಂಧ ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಐಟಿ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ಪ್ರಕಾರ ಆಕ್ಷೇಪಾರ್ಹ ಪೋಸ್ಟ್ ಅನ್ನು ತೆಗೆದುಹಾಕಲು ಮೇ 5 ರಂದು ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಗಳು ‘ಎಕ್ಸ್’ ಗೆ ನಿರ್ದೇಶನ ನೀಡಿದ್ದಾರೆ. ಆದಾಗ್ಯೂ ಆ ಪೋಸ್ಟ್ ಅನ್ನು ಇನ್ನೂ ತೆಗೆದು ಹಾಕಿಲ್ಲ. ಆ ಪೋಸ್ಟ್ ಅನ್ನು ತಕ್ಷಣವೇ ತೆಗೆದುಹಾಕಲು ನಿರ್ದೇಶಿಸಲಾಗಿದೆ” ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.

ಕರ್ನಾಟಕದ ಉಳಿದ 14 ಲೋಕಸಭಾ ಸ್ಥಾನಗಳಲ್ಲಿ ಮತದಾನ ನಡೆಯುತ್ತಿರುವ ದಿನವೇ ‘X’ ಗೆ ಚುನಾವಣಾ ಆಯೋಗ ಈಗ ಹೊಸ ನಿರ್ದೇಶನ ನೀಡಿದೆ.

ಬಿಜೆಪಿಯು ಮುಸ್ಲಿಂ ಮತ್ತು ಎಸ್‌ಸಿ/ಎಸ್‌ಟಿ ಸಮುದಾಯಗಳ ನಡುವೆ ದ್ವೇಷ ಉತ್ತೇಜಿಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ಕಾಂಗ್ರೆಸ್, ಅನಿಮೇಟೆಡ್ ಕಾರ್ಟೂನ್ ವಿಡಿಯೋ ವಿರುದ್ಧ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿತ್ತು.

WhatsApp Group Join Now
Telegram Group Join Now
Share This Article