ಅಮರಾವತಿ,22: ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್ಆರ್ಸಿಪಿ ಹಾಲಿ ಶಾಸಕರೊಬ್ಬರು ಮಾರ್ಚ್ 13 ರಂದು ನಡೆದ ಚುನಾವಣೆಯ ವೇಳೆ 7 ಮತಯಂತ್ರಗಳನ್ನು ನೆಲಕ್ಕೆ ಬಿಸಾಡಿ ಛಿದ್ರ ಮಾಡಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದೆ.
ವೈಎಸ್ಆರ್ಸಿಪಿ ಶಾಸಕ ಪಿನ್ನೆಲ್ಲಿ ರಾಮಕೃಷ್ಣ ರೆಡ್ಡಿ ಅವರು ಈ ಕೃತ್ಯ ನಡೆಸಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚುನಾವಣೆಗೆ ಅಡ್ಡಿ ಮತ್ತು ಕಾನೂನು ಮೀರಿದ ಆರೋಪದ ಮೇಲೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಕ್ರಮ ಜರುಗಿಸುವಂತೆ ಚುನಾವಣಾ ಆಯೋಗ ಹೇಳಿದೆ.
ಮಾಚರ್ಲಾ ಕ್ಷೇತ್ರದ ಹಾಲಿ ಮತ್ತು ಮೂರು ಬಾರಿ ಶಾಸಕರಾಗಿರುವ ಪಿನ್ನೆಲ್ಲಿ ರಾಮಕೃಷ್ಣ ರೆಡ್ಡಿ ಅವರು ರೆಂಟಚಿಂತಲ ಮಂಡಲದ ಪಲ್ವೊಯ್ಗೇಟ್ ಮತಗಟ್ಟೆ ಕೇಂದ್ರದ ಬೂತ್ 202 ರಲ್ಲಿ ನೇರವಾಗಿ ಬಂದು ವಿವಿ-ಪ್ಯಾಟ್ ಯಂತ್ರವನ್ನು ಎತ್ತಿ ನೆಲಕ್ಕೆ ಕುಕ್ಕಿ ಛಿದ್ರ ಮಾಡಿದ್ದಾರೆ. ಪೊಲೀಸರು ಮತ್ತು ಬೂತ್ ಚುನಾವಣಾಧಿಕಾರಿಗಳ ಸಮ್ಮುಖದಲ್ಲೇ ಈ ಘಟನೆ ನಡೆದಿದೆ.