ಹರ್ದೋಯ್: ಮರಳು ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿ ರಸ್ತೆಬದಿಯಲ್ಲಿದ್ದ ಗುಂಡಿಸಲಿನ ಮೇಲೆ ಬಿದ್ದಿದ್ದು, ಪರಿಣಾಮ ಗುಡಿಸಲಿನಲ್ಲಿದ್ದ ಒಂದೇ ಕುಟುಂಬದ ಎಂಟು ಮಂದಿ ದುರ್ಮರಣವನ್ನಪ್ಪಿರುವ ಘಟನೆಯ ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.
ಮಲ್ಲವನ್ ಪಟ್ಟಣದ ಉನ್ನಾವ್ ರಸ್ತೆಯಲ್ಲಿರುವ ಚುಂಗಿ ನಂಬರ್ 2 ಬಳಿ ನಾಟ್ ಸಮುದಾಯದ ಜನರು ರಸ್ತೆ ಬದಿಯ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಮಂಗಳವಾರ ಮಧ್ಯರಾತ್ರಿ ಕಾನ್ಪುರದಿಂದ ಹರ್ದೋಯ್‌ಗೆ ಹೋಗುತ್ತಿದ್ದ ಮರಳು ತುಂಬಿದ ಟ್ರಕ್ ನಿಯಂತ್ರಣ ತಪ್ಪಿ ಅವಧೇಶ್ ಅಲಿಯಾಸ್ ಬಲ್ಲಾಳನ ರಸ್ತೆ ಬದಿಯ ಗುಡಿಸಲು ಮೇಲೆ ಪಲ್ಟಿಯಾಗಿದೆ.
ಘಟನೆ ವೇಳೆ ಗುಡಿಸಲಿನಲ್ಲಿ ಮಲಗಿದ್ದ ನಾಲ್ವರು ಮಕ್ಕಳು ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ದಂಪತಿ, ಅವರ ನಾಲ್ವರು ಮಕ್ಕಳು ಮತ್ತು ಅಳಿಯ ಸೇರಿದ್ದಾರೆ. ಘಟನೆಯಲ್ಲಿ ಬಾಲಕಿಯೋರ್ವಳು ಗಂಭೀರವಾಗಿ ಗಾಯಗೊಂಡಿದ್ದಾಳೆಂದು ತಿಳಿದುಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಸ್ಥಳೀಯರು ಹಾಗೂ ಜೆಸಿಬಿ ಸಹಾಯದಿಂದ ಲಾರಿಯನ್ನು ನೇರಗೊಳಿಸಿ ಮರಳು ತೆಗೆದಿದ್ದಾರೆ.
ಮೃತರನ್ನು ಅವಧೇಶ್ ಅಲಿಯಾಸ್ ಬಲ್ಲ (45), ಅವರ ಪತ್ನಿ ಸುಧಾ ಅಲಿಯಾಸ್ ಮುಂಡಿ (42), ಪುತ್ರಿ ಸುನೈನಾ (11) , ಲಲ್ಲಾ (5), ಬುದ್ಧು (4), ಹೀರೋ (22), ಆಕೆಯ ಪತಿ ಕರಣ್ (25), ಕೋಮಲ್ ಅಲಿಯಾಸ್ ಬಿಹಾರಿ (5) ಎಂದು ಗುರ್ತಿಸಲಾಗಿದೆ. ಟ್ರಕ್ ಚಾಲಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.