ಬೆಂಗಳೂರು, ನವೆಂಬರ್ 9: ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ ಹಾಗೂ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ಬ್ರಿಟಿಷ್ ಕೌನ್ಸಿಲ್ನೊಂದಿಗೆ ಮಾಡಿಕೊಂಡಿರುವ ಶೈಕ್ಷಣಿಕ ಒಪ್ಪಂದದ ಹಿನ್ನೆಲೆಯಲ್ಲಿ ರಾಜ್ಯದ ಆರು ವಿಶ್ವವಿದ್ಯಾಲಯಗಳ 30 ವಿದ್ಯಾರ್ಥಿಗಳು ಹಾಗೂ ಆರು ಮಂದಿ ಆಧ್ಯಾಪಕರು ಯುನೈಟೆಡ್ ಕಿಂಗ್ಡಂನ ಈಸ್ಟ್ ಲಂಡನ್ ವಿಶ್ವವಿದ್ಯಾಲಯಕ್ಕೆ ತೆರಳಿದ್ದಾರೆ. ಅಲ್ಲಿನ ಕಲಿಕೆ, ಬೊಧನ ಶೈಲಿ ಹಾಗೂ ಹೊಸ ಕಲಿಕಾ ಮಾದರಿಗಳ ಪರಿಚಯ ಪಡೆಯುವುದರೊಂದಿಗೆ ಹೆಚ್ಚುವರಿ ಶಿಕ್ಷಣ ಪಡೆದಕೊಳ್ಳಲಿದ್ದಾರೆ.
ವಿವಿ ವಿದ್ಯಾರ್ಥಿಗಳ ಭವಿಷ್ಯದ ಕಲಿಕೆಯ ದೃಷ್ಟಿಯಿಂದ ಈ ಅಂತಾರಾಷ್ಟ್ರೀಯ ಪ್ರವಾಸ ಹಾಗೂ ಕಲಿಕೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಈಸ್ಟ್ ಲಂಡನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆಯ ವಿವರಗಳ ಕುರಿತು ಉನ್ನತ ಶಿಕ್ಷಣ ಸಚಿವರಾದ ಡಾ. ಎಂಸಿ ಸುಧಾಕರ್ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ.