ಬಳ್ಳಾರಿ, ಅ.21;; ಸಿಎಂ ಸಿದ್ದರಾಮಯ್ಯ- ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಾರಥ್ಯದ ನಮ್ಮ ರಾಜ್ಯದ ಘನ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಜಾತಿ ಆಧಾರಿತ ಶೈಕ್ಷಣಿಕ-ಆರ್ಥಿಕ-ಸಾಮಾಜಿಕ ಸಮೀಕ್ಷೆ ನಮ್ಮ ಸರ್ಕಾರದ ಸಾಧನೆಗಳಲ್ಲಿಯೇ ಪ್ರಮುಖ ಮೈಲುಗಲ್ಲು ಆಗಲಿದೆ ಎಂದು ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದ್ದಾರೆ.
ಈ ಕುರಿತು ಅವರು ಸೋಮವಾರ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿದ್ದಾರೆ.
ಬಳ್ಳಾರಿ ನಗರದ ನೆಹರೂ ಕಾಲೋನಿಯ ನನ್ನ ನಿವಾಸಕ್ಕೆ ಸೋಮವಾರ ಸಮೀಕ್ಷಾ ಕಾರ್ಯಕ್ಕಾಗಿ ಬಂದಿದ್ದರು, ಈ ಸಂದರ್ಭ ಗಣತಿದಾರರೊಂದಿಗೆ ಕೂತು, ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿ, ಸಮೀಕ್ಷಾ ಮಾಹಿತಿಯ ಘೊಷಣಾ ಪತ್ರಕ್ಕೆ ಸಹಿ ಹಾಕಿದ್ದೇನೆ, ಈ ಮೂಲಕ ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ನನ್ನ ಕರ್ತವ್ಯ ನಿಭಾಯಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಈವರೆಗೆ ನಡೆದ ಈ ಸಮೀಕ್ಷೆಯಲ್ಲಿ ಬಹುತೇಕ ಎಲ್ಲ ಸಾರ್ವಜನಿಕರೂ ಭಾಗವಹಿಸಿದ್ದು, ಇದು ನಮ್ಮ ಸರ್ಕಾರದ ಹಲವು ಸಾಧನೆಗಳಲ್ಲಿ ಪ್ರಮುಖ ಮೈಲುಗಲ್ಲಾಗಲಿದೆ. ಈ ಸಮೀಕ್ಷೆಯಿಂದ ಲಭ್ಯವಾಗುವ ದತ್ತಾಂಶವು ರಾಜ್ಯ ಸರ್ಕಾರಕ್ಕೆ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.