ಬಳ್ಳಾರಿ,ಡಿ.11..: ಮಾನವ ಹಕ್ಕುಗಳನ್ನು ಕಾಪಾಡಲು ಶಿಕ್ಷಣವೇ, ಶಕ್ತಿಯುತ ಆಯುಧ. ಮಾನವ ಹಕ್ಕುಗಳು ಪ್ರತಿಯೊಬ್ಬ ಮನುಷ್ಯನ ಜೀವನವನ್ನು ಗೌರವಿಸುವ ಮೂಲಭೂತ ಮೌಲ್ಯಗಳು. ವಿದ್ಯಾರ್ಥಿಗಳು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗುವುದರ ಜೊತೆಗೆ ಇತರರ ಹಕ್ಕುಗಳನ್ನು ಗೌರವಿಸುವ ಗುಣವನ್ನು ಬೆಳಸಿಕೊಳ್ಳಬೇಕು. ನ್ಯಾಯ, ಸಮಾನತೆ ,ಮಾನವೀಯತೆ ಇವುಗಳು ಸಮಾಜವನ್ನು ನಡೆಸುವ ಆಧಾರ ಸ್ತಂಭಗಳು.ಈ ಮೌಲ್ಯಗಳನ್ನು ಬಾಲ್ಯದಲ್ಲಿಯೇ ಆಳವಡಿಸಿಕೊಂಡಾಗ ಮಾತ್ರ ಶಾಂತಿಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದು ಶ್ರೀ ವಾಸವಿ ಎಜ್ಯುಕೇಷನ್ ಟ್ರಸ್ಟ್ ನ ಕಾರ್ಯದರ್ಶಿ ಪಿ.ಎನ್.ಸುರೇಶ್ ತಿಳಿಸಿದರು.
ಶ್ರೀ ವಾಸವಿ ವಿದ್ಯಾಲಯದಲ್ಲಿ ಮಾನವ ಹಕ್ಕುಗಳ ದಿನವನ್ನು ಜಾಗೃತಿ ಮತ್ತು ಸಾಂಸ್ಖತಿಕ ಚಟುವಟಿಕೆಗಳೊಂದಿಗೆ ಭವ್ಯವಾಗಿ ಆಚರಿಸಲಾಯಿತು. ಮಾನವ ಹಕ್ಕುಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜ್ಞಾನ, ಜಾಗೃತಿ ಮತ್ತು ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.
ಪ್ರತಿಯೊಬ್ಬರಲ್ಲೂ ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳುವ ಮತ್ತುಇತರರ ಹಕ್ಕುಗಳನ್ನು ಗೌರವಿಸುವ ನೈತಿಕತೆ ಬೆಳೆಸುವುದು. ಮಾನವ ಹಕ್ಕುಗಳಲ್ಲಿ ಜೀವಿಸುವ ಹಕ್ಕು, ಶಿಕ್ಷಣದ ಹಕ್ಕು, ಸಮಾನತೆಯ ಹಕ್ಕು,ಅಭಿವ್ಯಕ್ತಿಯ ಸ್ವಾತಂತ್ರ‍್ಯ, ಮಕ್ಕಳ ರಕ್ಷಣೆಯ ಹಕ್ಕು ,ಗೌರವ ಮತ್ತು ಸುರಕ್ಷಿತ ಜೀವನದ ಹಕ್ಕುಗಳಿವೆ. ಜೊತೆಗೆ ವಿದ್ಯಾರ್ಥಿಗಳು ತಮ್ಮ ಕರ್ತವ್ಯಗಳನ್ನು ಅರಿತುಕೊಳ್ಳಬೇಕು ಎಂಬ ಸಂದೇಶವನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ವಿದ್ಯಾರ್ಥಿಗಳು ಸಂವಿಧಾನಕ್ಕೆ ಗೌರವ , ಪರಿಸರ ಸಂರಕ್ಷಣೆ ,ಇತರರ ಹಕ್ಕುಗಳನ್ನು ಗೌರವಿಸುವುದು, ಶಿಸ್ತಿನ ಪಾಲನೆ, ದೇಶಪ್ರೇಮ, ಸಮಾಜ ಸೇವೆಯ ಮನೋಭಾವ ಕರ್ತವ್ಯಗಳನ್ನು ಅನುಸರಿಸಿದಾಗ ಮಾತ್ರ ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯಲು ಸಾಧ್ಯವೆಂಬುದು ಕಾರ್ಯಕ್ರಮದ ಉದ್ದೇಶವಾಗಿತ್ತು.
೭ನೇ ತರಗತಿಯ ಎ. ಸಿ. ಸಿಂಚನಾ ಮಾನವ ಹಕ್ಕುಗಳ ದಿನದ ಮಹತ್ವವನ್ನು ಸಂಕ್ಷಿಪ್ತವಾಗಿ ವಿವರಿಸಿ , ಮಾನವ ಹಕ್ಕುಗಳು ಪ್ರತಿಯೊಬ್ಬರಿಗೂ ಗೌರವ ,ಸ್ವಾತಂತ್ರ‍್ಯ ಮತ್ತು ಸುರಕ್ಷಿತ ಜೀವನ ನೀಡುವ ಮೂಲಭೂತ ಹಕ್ಕುಗಳು .ಹಕ್ಕುಗಳ ಜೊತೆಗೆ ಕರ್ತವ್ಯಗಳು ಇರಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಮಾನವ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಆಧರಿಸಿ “ ಹಕ್ಕು ಮತ್ತು ಕರ್ತವ್ಯಗಳ ಸಂಗಮ” ಎಂಬ ಸ್ವರಚಿತ ಶೈಕ್ಷಣಿಕ ನಾಟಕವನ್ನು ಅದ್ಭುತವಾಗಿ ಪ್ರದರ್ಶಿಸಿ, ಹಕ್ಕು ಕರ್ತವ್ಯಗಳ ಮಹತ್ವವನ್ನು ಸ್ಪಷ್ಟವಾಗಿ ಪರಿಚಯಿಸಿದರು. ಕುಮಾರಿ ಹರಿಣಿ ಮಾನವ ಹಕ್ಕುಗಳ ದಿನದ ಮಹತ್ವವನ್ನು ಆಧರಿಸಿ ಸುಂದರ ನೃತ್ಯ ಪ್ರದರ್ಶಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ತುಂಬಿದರು. ಶಾಲಾ ಮುಖ್ಯೋಪಾಧ್ಯಯರಾದ ವೀರೇಶ್ .ಯು ರವರು ಮಾನವ ಹಕ್ಕುಗಳ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ವರ್ಗ, ಮುಖ್ಯೋಪಾಧ್ಯಯರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.


