ನವದೆಹಲಿ,21: ಅಕ್ರಮ ಆಸ್ತಿ ಗಳಿಕೆ ಮತ್ತು ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಮಾಜಿ ಉದ್ಯಮ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ(ಡಿಪಿಐಐಟಿ) ಕಾರ್ಯದರ್ಶಿ ರಮೇಶ್ ಅಭಿಷೇಕ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ.
.1982-ಬ್ಯಾಚ್ ನ ಹಿರಿಯ ಐಎಎಸ್ ಅಧಿಕಾರಿಯ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ದಾಖಲಿಸಿದ ಇತ್ತೀಚಿನ ಎಫ್ಐಆರ್ ಆಧರಿಸಿ ಇಡಿ ಪ್ರಕರಣ ದಾಖಲಿಸಿಕೊಂಡಿದೆ.
ಕಳೆದ ಫೆಬ್ರವರಿಯಲ್ಲಿ ರಮೇಶ್ ಅಭಿಷೇಕ್ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿತ್ತು. ಅಭಿಷೇಕ್ 2019 ರಲ್ಲಿ ಹಿಂದಿನ ಕೈಗಾರಿಕಾ ನೀತಿ ಮತ್ತು ಪ್ರಚಾರ ಇಲಾಖೆ ಯಿಂದ ನಿವೃತ್ತರಾಗಿದ್ದರು.
ಮನಿ ಲಾಂಡರಿಂಗ್ ತನಿಖೆಯ ಭಾಗವಾಗಿ ಇಡಿ ಅಭಿಷೇಕ್ ಅವರ ಮನೆಯಲ್ಲಿ ಶೋಧ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.ಅಭಿಷೇಕ್ ಅವರು ಸೇವೆಯಲ್ಲಿದ್ದಾಗ ವ್ಯವಹರಿಸಿದ ಖಾಸಗಿ ಕಂಪನಿಗಳಿಂದ ಸಮಾಲೋಚನಾ ಶುಲ್ಕವಾಗಿ “ದೊಡ್ಡ ಮೊತ್ತ” ಪಡೆಯುವ ಮೂಲಕ ನಿವೃತ್ತಿಯ ನಂತರ “ಅಕ್ರಮವಾಗಿ” ಆಸ್ತಿ ಸಂಪಾದಿಸಿದ್ದಾರೆ ಎಂದು ಸಿಬಿಐ ತನ್ನ ಎಫ್ಐಆರ್ನಲ್ಲಿ ಆರೋಪಿಸಿದೆ.
ಸಿಬಿಐ ಮತ್ತು ಇಡಿ, ರಮೇಶ್ ಅಭಿಷೇಕ್ ಅವರ ಪುತ್ರಿ ವನೆಸ್ಸಾ ವಿರುದ್ಧವೂ ಪ್ರಕರಣ ದಾಖಲಿಸಿವೆ.ನಿವೃತ್ತ ಅಧಿಕಾರಿಯು ಫಾರ್ವರ್ಡ್ ಮಾರ್ಕೆಟ್ಸ್ ಕಮಿಷನ್ ಅಧ್ಯಕ್ಷ ಹುದ್ದೆಯನ್ನೂ ಹೊಂದಿದ್ದರು ಮತ್ತು ಭ್ರಷ್ಟಾಚಾರ ವಿರೋಧಿ ಲೋಕಪಾಲ್ ಉಲ್ಲೇಖದ ಮೇರೆಗೆ ಅವರ ವಿರುದ್ಧ ಸಿಬಿಐ ಪ್ರಕರಣವನ್ನು ದಾಖಲಿಸಿತ್ತು.