ಬಳ್ಳಾರಿ : ವಾಲ್ಮೀಕಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ಅವರ ಬಳ್ಳಾರಿಯ ನೆಹರು ಕಾಲೋನಿಯ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಸಿಆರ್ಪಿಎಫ್ ಯೋಧರ ಮೂಲಕ ಬೆಂಗಳೂರಿನಿಂದ ಬಂದ ಇಡಿ ಅಧಿಕಾರಿಗಳ ತಂಡ, ನಾಗೇಂದ್ರ ಅವರ ಮನೆಯಲ್ಲಿ ದಾಖಲೆ ಪರಿಶೀಲಿಸುತ್ತಿದೆ. ದಾಳಿ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೇ ಅಧಿಕಾರಿಗಳ ತಂಡ ಬಳ್ಳಾರಿಗೆ ಬಂದು ನಾಗೇಂದ್ರ ಅವರ ಮನೆಯಲ್ಲಿ ದಾಖಲೆಗಳ ಪರಿಶೀಲನೆ ಮುಂದಿವರೆಸಿದೆ.
ಬೆಳಗ್ಗೆ 7 ಗಂಟೆಗೆ ನಾಗೇಂದ್ರ ಅವರ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಸತತ 8 ಗಂಟೆಗಳಿಂದ ನಿರಂತರ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಮಾಜಿ ಸಚಿವ ನಾಗೇಂದ್ರ ಕುಟುಂಬಸ್ಥರು ಯಾರೂ ಮನೆಯಲ್ಲಿ ಇಲ್ಲದ ಕಾರಣ ಕೆಲಸಗಾರರು ಹಾಗೂ ಸಹಾಯಕರ ವಿಚಾರಣೆ ನಡೆಯುತ್ತಿದೆ.
ಇಡಿ ಅಧಿಕಾರಿಗಳ ತಂಡ ಶೋಧಕಾರ್ಯವನ್ನ ತೀವ್ರಗೊಳಿಸಿದ್ದು, 3-4 ಜನರ ಒಂದು ತಂಡ ನಾಗೇಂದ್ರ ಅವರ ಮನೆಯಲ್ಲಿ ಪರಿಶೀಲಿಸುತ್ತಿದ್ದರೆ ಇನ್ನೊಂದು ವಾಹನದಲ್ಲಿ ಇಡಿ ಅಧಿಕಾರಿಗಳು ನಾಗೇಂದ್ರ ಅವರ ಆಪ್ತರ ಮನೆ ಹುಡುಕುತ್ತಿದ್ದಾರೆ. ನಾಗೇಂದ್ರ ಅವರ ಸರಕಾರಿ ಆಪ್ತ ಸಹಾಯಕ ಚೇತನ್ ನೆರವಿನೊಂದಿಗೆ ಇಡಿ ಅಧಿಕಾರಿಗಳು ಕಂಪ್ಯೂಟರ್ ಪರಿಶೀಲನೆ ಮಾಡುತ್ತಿದ್ದಾರೆ.
ನಾಗೇಂದ್ರ ಮನೆಯಲ್ಲಿ ಇಡಿ ಅಧಿಕಾರಿಗಳ ದಾಳೆ ವೇಳೆ ಮಹತ್ವದ ಆಸ್ತಿ ದಾಖಲೆಗಳು ದೊರೆತಿವೆ. ಇದೀಗ ಕಂಪ್ಯೂಟರ್ ಡಾಟಾ ಶೋಧಕ್ಕೆ ಮುಂದಾಗಿರುವ ಇಡಿ ತಂಡ ವಾಲ್ಮೀಕಿ ನಿಗಮದ ಹಗರಣದ ಬಳಿಕ ಆಸ್ತಿ ಖರೀದಿ ಆಗಿದೆಯೆಂದು ಪರಿಶೀಲನೆ ನಡೆಸುತ್ತಿದೆ. ಆಸ್ತಿ ಪತ್ರಗಳು ದೊರೆತ ಬೆನ್ನಲ್ಲೇ ಶೋಧ ಕಾರ್ಯ ಚುರುಕುಗೊಂಡಿದೆ. ಮನೆ ಕೆಲಸಗಾರರು, ಆಪ್ತರಿಂದಲೂ ಮಾಹಿತಿ ಸಂಗ್ರಹಿಸುತ್ತಿರುವ ಇಡಿ ಹೈದ್ರಾಬಾದ್ ಟು ಬಳ್ಳಾರಿ ಅಕೌಂಟ್ ಲಿಂಕ್ ನ್ನು ಪರಿಶೀಲನೆ ಜೊತೆಗೆ ಆಸ್ತಿ ಪತ್ರಗಳ ಮೂಲ ಕೆದಕುತ್ತಿದೆ ಎಂದು ತಿಳಿದು ಬಂದಿದೆ.