ಬೆಂಗಳೂರು, ಜುಲೈ 19: ಶುಕ್ರವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಕರ್ನಾಟಕಾದ್ಯಂತ ದಾಳಿ ಮಾಡಿದ್ದಾರೆ. 12 ಜನ ಅಧಿಕಾರಿಗಳಿಗೆ ಸೇರಿದ 55 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ, ತಪಾಸಣೆ ನಡೆಸಿದ್ದಾರೆ. ಬೆಂಗಳೂರು ನಗರದ ಆರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇಬ್ಬರು, ಶಿವಮೊಗ್ಗ ಜಿಲ್ಲೆಯ ಇಬ್ಬರು, ಯಾದಗಿರಿ, ತುಮಕೂರಿನಲ್ಲಿ ತಲಾ ಓರ್ವ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ತುಮಕೂರಿನ ಕೆಐಎಡಿಬಿ ಅಪರ ನಿರ್ದೇಶಕ ಸಿ.ಟಿ ಮುದ್ದುಕುಮಾರ್ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಸಿ.ಟಿ ಮುದ್ದುಕುಮಾರ್ ಅವರಿಗೆ ಸೇರಿದ ಒಟ್ಟು ಏಳು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಸಿ.ಟಿ ಮುದ್ದುಕುಮಾರ್ ಬೆಂಗಳೂರಿನ ನಾಗರಭಾವಿಯ ಎರಡನೇ ಹಂತದಲ್ಲಿ ವಾಸವಾಗಿದ್ದಾರೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಖನಿಜ ಭವನದಲ್ಲಿ ಕಚೇರಿ ಇದೆ.
ತುಮಕೂರು ನಗರದ ಬನಶಂಕರಿ ನಗರದಲ್ಲಿ, ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿರುವ ಸಿ.ಟಿ ಮುದ್ದುಕುಮಾರ್ ಅವರಿಗೆ ಸೇರಿದ ಮನೆ ಇದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಹೋಬಳಿ ರಂಗನಾಥಪುರದಲ್ಲಿ ಸಿ.ಟಿ ಮುದ್ದುಕುಮಾರ್ ಅವರಿಗೆ ಸೇರಿದ ಫಾರಂಹೌಸ್ ಇದೆ. ಅಲ್ಲದೆ ತುಮಕೂರಿನ ಅಂತರಸನಹಳ್ಳಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಪ್ಲಾಸ್ಟಿಕ್ ಬಾಟಲ್ ತಯಾರಿಕಾ ಘಟಕವಿದೆ. ಈ ಎಲ್ಲ ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.