ಬೆಂಗಳೂರು, ಅಕ್ಟೋಬರ್ 4: ರಾಜ್ಯದಾದ್ಯಂತ ಸರ್ಕಾರಿ ಶಾಲೆ ಮಕ್ಕಳಿಗೆ ದಸರಾ ರಜೆಯ ಸಂಭ್ರಮವಾದರೆ ಖಾಸಗಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಈ ಸಂತಸ ಇಲ್ಲ. ಇದಕ್ಕೆ ಕಾರಣ ಖಾಸಗಿ ಮತ್ತು ಅನುದಾನಿತ ಶಾಲೆಗಳು ರಜೆಯಲ್ಲಿ ಕಡಿತ ಮಾಡುತ್ತಿರುವುದು. ಈ ಕುರಿತು ಕೇಳಿಬಂದಿರುವ ಆರೋಪಗಳಿಗೆ ಇದೀಗ ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್ ಆಫ್ ಪ್ರೈಮರಿ ಆ್ಯಂಡ್ ಸೆಕೆಂಡರಿ ಸ್ಕೂಲ್ಸ್ ಸ್ಪಷ್ಟೀಕರಣ ನೀಡಿದೆ.
ದಸರಾ ರಜೆಗೆ ಸಂಬಂಧಿಸಿದಂತೆ ಕೆಲವು ಖಾಸಗಿ ಶಾಲೆಗಳು ಸರ್ಕಾರಿ ಶೈಕ್ಷಣಿಕ ಕ್ಯಾಲೆಂಡರ್ಗೆ ಬದ್ಧವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್ ಆಫ್ ಪ್ರೈಮರಿ ಆ್ಯಂಡ್ ಸೆಕೆಂಡರಿ ಸ್ಕೂಲ್ಸ್, ರಜೆಯನ್ನು ನಿರ್ಧರಿಸುವ ವಿವೇಚನಾ ಅಧಿಕಾರವನ್ನು ಖಾಸಗಿ ಶಾಲೆಗಳು ಹೊಂದಿವೆ ಎಂದಿದೆ.
ಕ್ರಿಸ್ಮಸ್ ನಿಮಿತ್ತ ಡಿಸೆಂಬರ್ನಲ್ಲಿ ಮತ್ತೆ ರಜೆ ಘೋಷಿಸಬೇಕಾಗಿರುವುದರಿಂದ ಖಾಸಗಿ ಶಾಲೆಗಳು ದಸರಾ ರಜೆಯನ್ನು ಕಡಿತಗೊಳಿಸಿವೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಡಿ ಶಶಿಕುಮಾರ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.