ಬೆಂಗಳೂರು, (ಅಕ್ಟೋಬರ್ 07): ಕರ್ನಾಟಕದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಇಂದು ಕೊನೆ ದಿನವಾಗಿದೆ. ಆದ್ರೆ, ನಿರೀಕ್ಷೆಯಂತೆ ಸಮೀಕ್ಷೆ ಮುಗಿಯದ ಕಾರಣ ಜಾತಿಗಣತಿ ಅವಧಿಯನ್ನು ವಿಸ್ತರಿಸಲಾಗಿದೆ. ಶಿಕ್ಷಕರನ್ನು ಸಮೀಕ್ಷೆಗೆ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಇದರಿಂದ ಅಕ್ಟೋಬರ್ 18ರವರೆಗೆ ರಾಜ್ಯದ ಎಲ್ಲಾ ಶಾಲೆಗಳಿಗೆ ರಜೆ ನೀಡಲು ನಿರ್ಧರಿಸಲಾಗಿದೆ. ಈಗಾಲೇ ದಸರಾ ರಜೆಯಲ್ಲಿ ವಿದ್ಯಾರ್ಥಿಗಳಿಗೆ ಇದೀಗ ಜಾತಿಗಣತಿಯ ರಜೆ ಸಿಕ್ಕಂತಾಗಿದೆ.
ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಇಂದು ಕೊನೆ ದಿನವಾಗಿದ್ದರಿಂದ ಸಿಎಂ ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳ ಆಯೋಗದ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದು, ಶಿಕ್ಷಕರನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡು ಸಮೀಕ್ಷೆ ಪೂರ್ಣಗೊಳಿಸಲು ತೀರ್ಮಾನ ಸಭೆಯಲ್ಲಿ ನಿರ್ಧರಿಸಲಾಗಿದೆ. ಹೀಗಾಗಿ ಅಕ್ಟೋಬರ್ 18ರವರೆಗೆ ರಾಜ್ಯದ ಎಲ್ಲಾ ಶಾಲೆಗಳಿಗೆ ರಜೆ ನೀಡಲು ತೀರ್ಮಾನಿಸಲಾಗಿದೆ. ಸರ್ಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರಿಗೆ ಮಾತ್ರ ರಜೆ ಘೋಷಣೆ ಮಾಡಲಾಗಿದೆ. ಹೀಗಾಗಿ ಖಾಸಗಿ ಶಾಲೆಗಳಿಗೆ ಈ ರಜೆ ಅನ್ವಯವಾಗುವುದಿಲ್ಲ.
ಇನ್ನು ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅ.18ರವರೆಗೆ ಎಲ್ಲಾ ಶಾಲೆಗಳಿಗೆ (ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ) ರಜೆ ವಿಸ್ತರಣೆ ಮಾಡಲಾಗುವುದು. ರಜೆ ವಿಸ್ತರಣೆ ಮಾಡಬೇಕೆಂದು ಶಿಕ್ಷಕರ ಸಂಘ ಮನವಿ ಮಾಡಿತ್ತು. ಮನವಿ ಆಧರಿಸಿ ಅ.18ರವರೆಗೆ ಶಾಲೆಗಳಿಗೆ ರಜೆ ನೀಡಲಾಗುವುದು. ಸಮೀಕ್ಷೆಯಲ್ಲಿ 1.20 ಲಕ್ಷ ಶಿಕ್ಷಕರು ಭಾಗಿಯಾಗಿದ್ದಾರೆ. ಪೂರ್ಣ ಕೆಲಸ ಆಗಬೇಕು ಅಂದ್ರೆ ರಜೆ ವಿಸ್ತರಿಸುವಂತೆ ಕೇಳಿದ್ದಾರೆ. ಹಾಗಾಗಿ ನಾಳೆಯಿಂದ ಅಕ್ಟೋಬರ್ 18ರವರೆಗೆ ಶಾಲೆಗಳಿಗೆ ರಜೆ ನೀಡಲು ತೀರ್ಮಾನಿಸಲಾಗಿದೆ. ಪಿಯುಸಿ ಉಪನ್ಯಾಸಕರು ಸಮೀಕ್ಷೆಯಲ್ಲಿ ಭಾಗಿಯಾಗುವಂತಿಲ್ಲ. ಇನ್ನು ಬೆಂಗಳೂರಿನಲ್ಲಿ 6,700 ಶಿಕ್ಷಕರು ಸಮೀಕ್ಷೆ ಭಾಗಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.