ಬ್ಯಾಂಕ್ ದರೋಡೆ ತನಿಖೆ ವೇಳೆ ನಕಲಿ ನಂಬರ್ ವಾಹನಗಳ ಹಾವಳಿ

Ravi Talawar
ಬ್ಯಾಂಕ್ ದರೋಡೆ ತನಿಖೆ ವೇಳೆ ನಕಲಿ ನಂಬರ್ ವಾಹನಗಳ ಹಾವಳಿ
WhatsApp Group Join Now
Telegram Group Join Now

ಮಂಗಳೂರು, ಜನವರಿ 21: ಉಳ್ಳಾಲ ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ ಕರ್ನಾಟಕದಾದ್ಯಂತ ಭಾರೀ‌ ಸಂಚಲನ‌ ಸೃಷ್ಟಿಸಿತ್ತು. ಇದೀಗ ಮೂವರು ಆರೋಪಿಗಳನ್ನು ಬಂಧಿಸಿರುವ ಮಂಗಳೂರು ಪೊಲೀಸರು ಚಿನ್ನಾಭರಣಗಳನ್ನೂ ವಶಪಡಿಸಿಕೊಂಡಿದ್ದಾರೆ. ಈ ನಡುವೆ, ಪ್ರಕರಣದ ತನಿಖೆ ನಡೆಸುತ್ತಿದ್ದಾಗ ಸ್ಫೋಟಕ‌ ಮಾಹಿತಿ ಬಹಿರಂಗಗೊಂಡಿದೆ. ರಾಜ್ಯಾದ್ಯಂತ ಸಾವಿರಾರು ವಾಹನಗಳು ನಕಲಿ ನಂಬರ್ ಪ್ಲೇಟ್ ಅಳವಡಿಸಿ ಓಡಾಡುತ್ತಿವೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಬ್ರಹ್ಮರಕೂಟ್ಲು ಟೋಲ್ ಗೇಟ್​ನಲ್ಲಿ ಬ್ಯಾಂಕ್ ದರೋಡೆಕೋರರು ಪಾಸಾಗಿದ್ದಾರೆಂಬ ಶಂಕೆಯಿಂದ ಪರಿಶೀಲಿಸಿದ್ದರೂ‌, ಅವರು ಸರ್ವಿಸ್ ರಸ್ತೆಯ ಮೂಲಕ ತೆರಳಿದ್ದಾರೆ ಎಂಬುದು ಬಳಿಕ ಗೊತ್ತಾಗಿದೆ. ಆದರೆ, ಆ ಟೋಲ್ ಗೇಟ್​ನ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಕಾರು, ಟೆಂಪೋ ಟ್ರಾವೆಲ್ಲರ್, ಲಾರಿ ಸೇರಿದಂತೆ ಹತ್ತಾರು ವಾಹನಗಳು ಫೇಕ್ ನಂಬರ್ ಪ್ಲೇಟ್ ಅಳವಡಿಸಿರುವುದು ಬೆಳಕಿಗೆ ಬಂದಿದೆ. ಅಂದರೆ ವಾಹನದಲ್ಲಿ ಇರುವ ನಂಬರೇ ಬೇರೆ, ಫಾಸ್ಟ್ ಟ್ಯಾಗ್ ರೀಡ್ ಮಾಡುವ ನಂಬರೇ ಬೇರೆ!

ಈ ರೀತಿ ನಕಲಿ ನಂಬರ್ ಪ್ಲೇಟ್ ಯಾಕಾಗಿ ಅಳವಡಿಸಿದ್ದಾರೆ ಎಂಬ ಸಂದೇಹ ಇದೀಗ ಬಲವಾಗಿದೆ. ಕೆಲವರು ಎರಡೆರಡು ವಾಹನಗಳಿಗೂ ಒಂದೇ ಫಾಸ್ಟ್ ಟ್ಯಾಗ್ ಬಳಕೆ ಮಾಡುವವರೂ ಇದ್ದಾರೆ. ಆದರೂ ಈ‌ ರೀತಿ ನಕಲಿ ನಂಬರ್ ಪ್ಲೇಟ್ ಅಳವಡಿಸಿರುವ ವಾಹನಗಳ ತಪಾಸಣೆ ನಡೆಸಲೂ ಇದೀಗ ಪೊಲೀಸ್ ಇಲಾಖೆ ಮುಂದಾಗಿದೆ.

ಯಾವ ಕಾರಣಕ್ಕಾಗಿ ವಾಹನದಲ್ಲೊಂದು, ಫಾಸ್ಟ್ ಟ್ಯಾಗ್​​ನಲ್ಲೊಂದು ವಾಹನದ ನಂಬರ್ ಅಳವಡಿಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಒಟ್ಟಿನಲ್ಲಿ, ಕೋಟೆಕಾರು ಬ್ಯಾಂಕ್ ದರೋಡೆಕೋರರ ತನಿಖೆಯಿಂದ ಮತ್ತೊಂದು ಅಕ್ರಮ ಬೆಳಕಿಗೆ ಬಂದಂತಾಗಿದೆ.

WhatsApp Group Join Now
Telegram Group Join Now
Share This Article