ಸಿಜೆಐ ಗವಾಯಿ ಅವಮಾನ ಖಂಡಿಸಿದ ಡಿಎಸ್‌ಎಸ್‌

Ravi Talawar
ಸಿಜೆಐ ಗವಾಯಿ ಅವಮಾನ ಖಂಡಿಸಿದ ಡಿಎಸ್‌ಎಸ್‌
WhatsApp Group Join Now
Telegram Group Join Now

ಹಸಿರು ಕ್ರಾಂತಿ ವರದಿ, ಜಮಖಂಡಿ ; ದೇಶದ ಸರ್ವೋಚ್ಚ ನ್ಯಾಯಾಲಯದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಅವರ ಮೇಲೆ ನ್ಯಾಯಾಲಯ ಆವರಣದಲ್ಲಿ ಶೂ ಎಸೆದಿರುವ ವಕೀಲನ ಕೃತ್ಯವನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸಿದೆ. ಈ ಕುರಿತು ಸಮಿತಿಯ ಜಿಲ್ಲಾ ಸಂಚಾಲಕ ಮುತ್ತಣ್ಣ ಮೇತ್ರಿ ಪತ್ರಿಕಾ ಪ್ರಕಟಣೆಯಲ್ಲಿ ತೀವ್ರ ವಾಗಿ ಖಂಡಿಸಿದ್ದಾರೆ.

ಘಟನೆ ಕೇವಲ ವ್ಯಕ್ತಿಗತ ದೌರ್ಜನ್ಯವಲ್ಲ, ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಡೆದಿರುವ ಅಪಮಾನಕಾರಿ ದಾಳಿ ಯಾಗಿದೆ. ಇದು ನ್ಯಾಯಕ್ಕೆ ಹಾಗೂ ಸಂವಿಧಾನಕ್ಕೆ ಮಾಡಿದ ಅವಮಾನವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಯುವುದು ನಮ್ಮೆಲ್ಲರ ಜವಾಬ್ದಾರಿ ಯಾಗಿದೆ ಎಂದು ತಿಳಿಸಿದ್ದಾರೆ.

ಡಾ. ಬಿ.ಆರ್. ಅಂಬೇಡ್ಕರ ಅವರು ಪ್ರತಿಪಾದಿಸಿದ ಸಾಮಾಜಿಕ ಪ್ರಜಾಪ್ರಭುತ್ವದ ತತ್ವಗಳಿಗೆ ಈ ಘಟನೆ ತೀವ್ರ ಧಕ್ಕೆ ಉಂಟುಮಾಡಿದೆ. ನಿಜವಾದ ಸಮಾನತೆ ಇನ್ನೂ ನಮ್ಮ ದೇಶದಲ್ಲಿ ನೆಲೆಸಿಲ್ಲ. ಜಾತಿ ಆಧಾರಿತ ಚಿಂತನೆಗಳು ಅಂತ್ಯಗೊಳ್ಳುವವರೆಗೆ ಸಂವಿಧಾನದ ಆಶಯಗಳು ಸಾಕಾರಗೊಳ್ಳುವುದಿಲ್ಲ. ಶೋಷಿತ ಸಮುದಾಯದಿಂದ ಬಂದಿರುವ ಶ್ರೀ ಗವಾಯಿ ಅವರು ತಮ್ಮ ಶ್ರಮ, ಬುದ್ಧಿವಂತಿಕೆ ಮತ್ತು ನಿಷ್ಠೆಯಿಂದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಹೊರಹೊಮ್ಮಿದ್ದಾರೆ. ಅವರ ಮೇಲಿನ ಹಿಂಸಾತ್ಮಕ ಕೃತ್ಯ ನೇರವಾಗಿ ದೇಶದ ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆಯ ಅಪಮಾನವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಹನಮಂತ ಚಿಮ್ಮಲಗಿ (ಬೆಳಗಾವಿ ವಿಭಾಗ), ಆನಂದ್ ದೊಡಮನಿ, ಕೃಷ್ಣಮೂರ್ತಿ ನಾಯ್ಕರ್, ಸಂಗಣ್ಣ ಮಡ್ಡಿ, ಚಂದ್ರು ಹರಿಜನ, ಲಕ್ಷ್ಮಣ್ ಹರಿಜನ, ಮಾರುತಿ ಮರೆಗುದ್ದಿ, ಸಂಜು ದೊಡಮನಿ, ಮುಕೇಶ್ ಅರಳಿಕಟ್ಟಿ ಪರಶುರಾಮ ಆಲಗೂರ ಮುಂತಾದವರು ಇದ್ದರು.

WhatsApp Group Join Now
Telegram Group Join Now
Share This Article