ಮಕ್ಕಳ ಜೀವದ ಅಡಿಗೆ ಶಾಲಾ ಕಟ್ಟಡಗಳ ಸುರಕ್ಷತೆಯ ಪರಿಪಾಠ – ಶಿಕ್ಷಣ ಇಲಾಖೆ ಚುರುಕು
ಚನ್ನಮ್ಮನ ಕಿತ್ತೂರು: ಚನ್ನಮ್ಮನ ಕಿತ್ತೂರ ತಾಲೂಕಿನ ಶಾಲಾ ಮಕ್ಕಳ ಸುರಕ್ಷತೆಯ ಹಿತದೃಷ್ಟಿ ಮತ್ತು ಶಾಲಾ ಮಕ್ಕಳ ಜೀವದ ರಕ್ಷಣೆ ಮತ್ತು ಶಾಲಾ ಕಟ್ಟಡಗಳ ಸ್ಥಿರತೆಯ ಪರಿಶೀಲನೆ ಉದ್ದೇಶದಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಕಟ್ಟಡಗಳ ಸುರಕ್ಷತಾ ಅಭಿಯಾನ–2025ಕ್ಕೆ ಶಾಸಕ ಬಾಬಾಸಾಹೇಬ ಪಾಟೀಲ ಅವರು ಸಾಂಕೇತಿಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಚನಬಸಪ್ಪ ತುಬಾಕದ ಮಾತನಾಡಿ ಇತ್ತೀಚೆಗೆ ರಾಜಸ್ಥಾನದಲ್ಲಿ ನಡೆದ ಭೀಕರ ಘಟನೆ—ಶಾಲಾ ಕೊಠಡಿ ಕುಸಿದು 7 ಮಕ್ಕಳು ಮೃತಪಟ್ಟ ದುರಂತ ಹಾಗೂ ಹಾವೇರಿ ಜಿಲ್ಲೆಯ ಹಂಸಭಾವಿ ಗ್ರಾಮದಲ್ಲಿ ತೆಂಗಿನ ಮರ ಬಿದ್ದು ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆಗಳು ಆತಂಕ ಉಂಟುಮಾಡಿದ ಹಿನ್ನಲೆಯಲ್ಲಿ ತಾಲೂಕಿನಲ್ಲಿ ಜುಲೈ 25 ರಿಂದ ಆಗಸ್ಟ್ 4ರವರೆಗೆ ಶಾಲಾ ಕಟ್ಟಡಗಳ ಸಮಗ್ರ ಪರಿಶೀಲನೆ ಕೈಗೊಳ್ಳಲಾಗಿದೆ,” ಎಂದು ವಿವರಿಸಿದರು.
130 ಶಾಲೆಗಳ ಕಟ್ಟಡಗಳಿಗೆ ಸಮಗ್ರ ಪರಿಶೀಲನೆ: ಕಿತ್ತೂರು ಶೈಕ್ಷಣಿಕ ತಾಲೂಕಿನಲ್ಲಿ ಇರುವ 130 ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಕಟ್ಟಡಗಳ ಸ್ಥಿರತೆ ಹಾಗೂ ಸುರಕ್ಷತೆ ಕುರಿತು ಸಮಗ್ರ ಪರಿಶೀಲನೆ ನಡೆಸಲಾಗಿದೆ. ಈ ಅಭಿಯಾನದ ಅಡಿಯಲ್ಲಿ ಪ್ರಮುಖವಾಗಿ ಈ ಕೆಳಗಿನ ಕ್ರಮಗಳು ಜಾರಿಗೆ ಬರುವಂತಾಗಿದೆ:
ಅಪಾಯದಲ್ಲಿರುವ ಕೊಠಡಿಗಳಿಗೆ ಪರ್ಯಾಯ ವ್ಯವಸ್ಥೆ: ಸುಸ್ಥಿರ ಸ್ಥಿತಿಯಲ್ಲಿಲ್ಲದ ಕೊಠಡಿಗಳಿಗೆ ವಿದ್ಯಾರ್ಥಿಗಳನ್ನು ಪ್ರವೇಶಿಸದಂತೆ ಮಾಡಿ, ಅಲ್ಲಿ ರೆಡ್ ರಿಬ್ಬನ್ ಅಳವಡಿಸುವ ಮೂಲಕ ಅಪಾಯದ ಸೂಚನೆ ನೀಡಲಾಗಿದೆ.
ಮಳೆನೀರು ನಿಲ್ಲದಂತೆ ವ್ಯವಸ್ಥೆ: ಮಳೆಗಾಲದಲ್ಲಿ ಕೊಠಡಿಗಳ ಚಾವಣಿ ಮೇಲೆ ನೀರು ನಿಲ್ಲದಂತೆ ಕಸಕಡ್ಡಿ ನಿಲ್ಲದಂತೆ ಮತ್ತು ಸಿಮೆಂಟ್ ಅಥವಾ ಹಂಚುಗಳು ಹಾರಿ ಬೀಳದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಚೆರಂಡಿಗಳ ಶುದ್ಧೀಕರಣ: ಕೆಲವೆ ಶಾಲೆಗಳ ಸುತ್ತಮುತ್ತಿ ಹಳೆಯ ಚೆರಂಡಿಗಳು ಇದ್ದು ಅವುಗಳನ್ನು ಸ್ಥಳೀಯ ಪಂಚಾಯಿತಿ ಹಾಗೂ ಸಂಸ್ಥೆಗಳ ಸಹಾಯದಿಂದ ಶುದ್ಧಗೊಳಿಸಲಾಗಿದೆ.
ಹಳೆಯ ಮರಗಳ ತೆರವು: ಶಾಲಾ ಆವರಣದಲ್ಲಿ ಅಪಾಯಕಾರಿಯಾದ ಹಳೆಯ ಮರಗಳು ಇದ್ದರೆ ಅಂಥಹ ಮರಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ.
ರೋಗ-ಕೀಟ ನಿಯಂತ್ರಣ: ಗಿಡಗಂಟಿ ಮತ್ತು ಕೀಟಗಳಿಂದ ಮಕ್ಕಳಿಗೆ ಅಪಾಯ ಉಂಟಾಗದಂತೆ ಆವರಣದಲ್ಲಿ ನಿಯಮಿತ ಸ್ವಚ್ಚತೆ ಕಾಪಾಡಲಾಗುತ್ತಿದೆ.
ಸಿವಿಲ್ ಕಾಮಗಾರಿಗಳಿಗೆ ಮುನ್ನೆಚ್ಚರಿಕೆ: ಕೆಲವು ಶಾಲೆಗಳಲ್ಲಿ ನಡೆಯುತ್ತಿರುವ ಸಿವಿಲ್ ಕಾಮಗಾರಿಗಳು ನಡೆಯುತ್ತಿವೆ ಅಂಥಹ ಪ್ರದೇಶದಲ್ಲಿ ಮಕ್ಕಳಿಗೆ ಪ್ರವೇಶಿಸದಂತೆ ಎಚ್ಚರಿಕೆ ಫಲಕ ಹಾಗೂ ಮಾಹಿತಿ ನೀಡಲಾಗಿದೆ.
ಡಿಸಾಸ್ಟರ್ ಮ್ಯಾನೇಜ್ಮೆಂಟ್ ತರಬೇತಿ: ಗುಡುಗು, ಮಿಂಚು, ಭೂಕಂಪ ಇತ್ಯಾದಿ ಅಪಘಾತಗಳನ್ನು ಎದುರಿಸುವ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಲಾಗುತ್ತಿದೆ.
ದೈನಂದಿನ ಪರಿಶೀಲನೆ: ಮಳೆಗಾಲ ಮುಗಿಯುವವರೆಗೆ ಪ್ರತಿದಿನ ಶಾಲೆ ಆರಂಭದ ಮೊದಲು ಮತ್ತು ಮುಕ್ತಾಯದ ನಂತರ ಮುಖ್ಯ ಶಿಕ್ಷಕರು ಕೊಠಡಿಗಳನ್ನು ಪರಿಶೀಲಿಸಿ ಮಕ್ಕಳು ಪ್ರವೇಶಿಸಲು ಅನುಮತಿಸಲು ಸೂಚಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ತುಬಾಕದ ಮಾಹಿತಿ ನೀಡಿದರು.
ಶಾಸಕ ಬಾಬಾಸಾಹೇಬ ಪಾಟೀಲ ಅವರು ಮಾತನಾಡಿ, “ನಾನು ಶಾಸಕನಾಗಿ ಬಂದ ನಂತರ ಗುಡಿ–ಗುಂಡಾರಗಳಿಗೆ ನೀಡುತ್ತಿದ್ದ ಅನುದಾನವನ್ನು ಕಡಿಮೆ ಮಾಡಿ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದೇನೆ. ಹಲವು ಶಾಲೆಗಳಿಗೆ ಅನುದಾನ ಒದಗಿಸಲಾಗಿದೆ. ಮುಂಬರುವ ದಿನಗಳಲ್ಲಿ ಶಿತಲಾವಸ್ಥೆಯಲ್ಲಿರುವ ಒಂದೇ ಒಂದು ಕೊಠಡಿಯೂ ಉಳಿಯದಂತೆ ಕ್ರಮ ಕೈಗೊಳ್ಳುತ್ತೇನೆ. ಈ ಹಿಂದೆ ಕೆಲವು ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್’ಗಳ ಸ್ಥಾಪನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲ ಶಾಲೆಗಳಲ್ಲಿ ಈ ವ್ಯವಸ್ಥೆ ಏರ್ಪಡಿಸುವ ಗುರಿಯನ್ನು ಹೊಂದಿದ್ದೇನೆ. ಶಿಕ್ಷಣ ಗುಣಮಟ್ಟವನ್ನು ಹೆಚ್ಚಿಸುವ ಜೊತೆಗೆ ಮಕ್ಕಳ ಜೀವದ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಹೇಳಿದ ಅವರು ಶಾಲಾ ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅಪಘಾತಗಳ ಮುನ್ನೆಚ್ಚರಿಕೆ ಮತ್ತು ಮಕ್ಕಳಿಗೆ ಸೂಕ್ತ ಮಾಹಿತಿ ನೀಡುವುದು ಅತ್ಯವಶ್ಯಕ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರ ಅನುದಾನದಡಿಯಲ್ಲಿ ದುರಸ್ತಿ ಮಾಡಲಾದ ಶಾಲಾ ಕೊಠಡಿಗಳಿಗೆ ಉದ್ಘಾಟನೆ ನೆರವೇರಿತು. ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು ಶಾಸಕ ಬಾಬಾಸಾಹೇಬ ಪಾಟೀಲ, ತಹಶೀಲ್ದಾರ ಕಲಗೌಡ ಪಾಟೀಲ, ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಚನಬಸಪ್ಪ ತುಬಾಕದ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಮುಖ್ಯ ಶಿಕ್ಷಕ ಎಸ್.ವೈ. ಕಾಶಪ್ಪನವರ, ಸಹಶಿಕ್ಷಕರಾದ ಕೆ. ರುಕ್ಮೀಣಿ, ರಂಜಿತಾ ಹಂಚಿನಮನಿ, ಶ್ರೀದೇವಿ ಕಾರಜೋಳ, ಎಮ್.ಜಿ. ಪಾಟೀಲ, ಎಸ್. ಎಸ್.ಶಿವಪ್ಪನವರ, ಎ.ಬಿ. ಕಾಗೆಪ್ಪಗೋಳ, ಅಶೋಕ ಗಿರೆಪ್ಪಗೌಡರ, ಎಸ್ಡಿಎಂಸಿ ಅಧ್ಯಕ್ಷ ಚಂದ್ರಶೇಕರ ಹಡಪದ, ಉಪಾಧ್ಯಕ್ಷೆ ಶೃತಿಕಾ ಮುರಗೋಡ, ಸದಸ್ಯರಾದ ರುದ್ರಪ್ಪ ಕಟ್ಟಿಮನಿ, ರವಿ ಭೋವಿ, ಶಂಭುಲಿಂಗ ಕುಲಕರ್ಣಿ, ಬಸವರಾಜ ಭಜಂತ್ರಿ, ಶ್ರೀನಾಥ ಚೌಗಲಾ, ಫಕ್ಕಿರಪ್ಪ ಗುಂಜಿ, ಕೃಷ್ಣಾ ವಾಸ್ಟರ್ಸೇರಿದಂತೆ ಶಾಲೆಯ ಮಕ್ಕಳು ಮತ್ತು ಪಟ್ಟಣದ ನಾಗರಿಕರು ಇದ್ದರು.