ಕುಡಿಯುವ ನೀರಿನ ಸಮಸ್ಯೆ, ಬರಗಾಲ ನಿರ್ವಹಣೆ ಪರಿಹಾರ ಸಭೆ ಅಪೂರ್ಣ: ಜಿಲ್ಲಾ ಆಡಳಿತದ ವಿರುದ್ಧ ರೈತರ ಧಿಕ್ಕಾರ

Ravi Talawar
ಕುಡಿಯುವ ನೀರಿನ ಸಮಸ್ಯೆ, ಬರಗಾಲ ನಿರ್ವಹಣೆ ಪರಿಹಾರ ಸಭೆ ಅಪೂರ್ಣ: ಜಿಲ್ಲಾ ಆಡಳಿತದ ವಿರುದ್ಧ ರೈತರ ಧಿಕ್ಕಾರ
WhatsApp Group Join Now
Telegram Group Join Now
ಅಥಣಿ,ಏಪ್ರಿಲ್ 02: ತಾಲೂಕಿನಲ್ಲಿ ತಲೆದೂರಿರುವ ಕುಡಿಯುವ ನೀರಿನ ಸಮಸ್ಯೆ ಮತ್ತು ಬರಗಾಲ ನಿರ್ವಹಣೆಗೆ ಕೆಲವು ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ನಿತೀಶ ಪಾಟೀಲ ಅವರ ಅಧ್ಯಕ್ಷತೆಯಲ್ಲಿ  ನಡೆದ ಸಭೆಯು ಕುಡಿಯುವ ನೀರಿನ ಸಮಸ್ಯೆಗೆ ಯಾವುದೇ ಪರಿಹಾರ ಕಾಣದೆ ಹಲವು ಗೊಂದಲಗಳ ಮಧ್ಯೆ ತರಾತುರಿಯಲ್ಲಿ ಸಭೆಯನ್ನು ಮುಡುಕು ಗೊಳಿಸಿದ ಪ್ರಸಂಗ ಅಥಣಿಯಲ್ಲಿ ಇಂದು ಜರುಗಿತು.
 ಅಥಣಿ ಪಟ್ಟಣದ ಎಸ್ ಎಸ್ ಎಮ್ ಎಸ್ ಮಹಾವಿದ್ಯಾಲಯದ ಖೋತ್ ಸಭಾಂಗಣದಲ್ಲಿ ತಾಲೂಕ ಆಡಳಿತದಿಂದ ಆಯೋಜಿಸಲಾಗಿದ್ದ ಬರಗಾಲ ನಿರ್ವಹಣಾ ಸಭೆಯಲ್ಲಿ ತಾಲೂಕಿನ ಪೂರ್ವ ಭಾಗದ ಹಾಗೂ ಉತ್ತರ ಭಾಗದ ಹಳ್ಳಿಗಳ ಜನರಿಗಿಂತ ಕೃಷ್ಣಾ ನದಿ ತೀರದ ಗ್ರಾಮಗಳ ರೈತರು ಮತ್ತು ರೈತ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಆಗಮಿಸಿದ್ದರು.
 ಬೇಸಿಗೆಯ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು, ತಾಲೂಕಿನ ಜನತೆಗೆ ಜೀವನಾಡಿ ಕೃಷ್ಣಾ ನದಿಯಲ್ಲಿ ನೀರಿನ ಸಂಗ್ರಹ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಬಾವಿ ಬೋರ್ವೆಲ್ ಗಳಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗಿ ಕುಡಿಯಲು ನೀರು ಸಿಗುತ್ತಿಲ್ಲ, ಜಿಲ್ಲಾಡಳಿತ ಕೂಡಲೇ ನೆರೆಯ ಮಹಾರಾಷ್ಟ್ರದಿಂದ 3 ಟಿಎಂಸಿ ನೀರನ್ನು ಬೇಗನೆ ಬಿಡಿಸುವ ವ್ಯವಸ್ಥೆ ಮಾಡಬೇಕು. ಕೃಷ್ಣಾ ನದಿ ತೀರದಲ್ಲಿ ಕಬ್ಬಿನ ಬೆಳೆ ಒಣಗುತ್ತಿದ್ದು ದಿನದ 6 ಗಂಟೆ ವಿದ್ಯುತ್ ಪೂರೈಸಬೇಕು ಎಂದು ರೈತರು ಮತ್ತು ರೈತ ಮುಖಂಡರು ಜಿಲ್ಲಾ ಆಡಳಿತವನ್ನು ಒತ್ತಾಯಿಸಿದರು.
ಈ ವೇಳೆ ಜಿಲ್ಲಾಧಿಕಾರಿ ನಿತೀಶ ಪಾಟೀಲ ಮಾತನಾಡಿ ಕೃಷ್ಣಾ ನದಿ ನೀರು ಅತಿಯಾದ ಬಿಸಿಲಿನ ತಾಪಕ್ಕೆ ನೀರಿನ ಮಟ್ಟ ಕಡಿಮೆಯಾಗಿದ್ದು, ಬರುವ ಏಪ್ರಿಲ್ 10ರವರೆಗೆ ಮಾತ್ರ ಸಾಕಾಗುವಷ್ಟು ನೀರು ನದಿಯಲ್ಲಿ ಇರುವದರಿಂದ ಕುಡಿಯುವ ನೀರಿನ ಸಮಸ್ಯೆ ಅಧಿಕವಾಗಲಿದ್ದು, ನೀರನ್ನು ಎಲ್ಲರೂ ಹಿತಮಿತವಾಗಿ ಬಳಸಬೇಕು ಎಂದು ಹೇಳಿದರು.
 ಕೃಷ್ಣಾ ನದಿ ತೀರದ ವಿವಿಧ ಗ್ರಾಮಗಳ ರೈತರು ತಮ್ಮ ಊರಿನ ಸಮಸ್ಯೆಗಳನ್ನು ಹೇಳಲು ಮುಂದಾದಾಗ ಸಭೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಈ ವೇಳೆ ಶೇಗುಣಶಿ ಗ್ರಾಮದ ರೈತ ಮುಖಂಡ  ಸುರೇಶ ಗೌಡ ಪಾಟೀಲ ಮಾತನಾಡಿ ಹಿಪ್ಪರಗಿ ಅಣೆಕಟ್ಟಿನ ಹಿಂಭಾಗದ ಗ್ರಾಮಗಳಿಗೆ ಮತ್ತು ಮುಂಭಾಗದ ಗ್ರಾಮಗಳಿಗೆ ಜಗಳ ಹಚ್ಚುವ ಕೆಲಸ ಮಾಡಬೇಡಿ. ನಾವು ಪ್ರವಾಹ ಪರಿಸ್ಥಿತಿಯಲ್ಲಿಯೂ ಕೂಡ ಅನೇಕ ಸಮಸ್ಯೆಗಳನ್ನು ಎದುರಿಸಿ ಪರಿಹಾರದಿಂದ ವಂಚಿತರಾಗಿದ್ದೇವೆ. ಬರಗಾಲದ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕವನ್ನ ಖಂಡಿತ ಮಾಡುವುದರಿಂದ  ನಮ್ಮ ಕಬ್ಬಿನ ಬೆಳೆಗಳೆಲ್ಲ ಒಣಗಿ ಹೋಗುತ್ತಿವೆ. ಈ ರೀತಿ ಸಮಸ್ಯೆ ಆದರೆ ನಾವು ಬದುಕುವುದು ಹೇಗೆ. ಈ ರೀತಿ ಪ್ರತಿ ವರ್ಷ ತೊಂದರೆಯಾದರೆ ನಾವು ಸಾಯುವುದೇ ಮೇಲು. ಅದಕ್ಕೆ ತಾಲೂಕ ಆಡಳಿತ ಮತ್ತು ಜಿಲ್ಲಾಡಳಿತ  ನಮಗೆ ದಯಮರಣಕ್ಕೆ ಅವಕಾಶ ನೀಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ರಾಜೀವ ನಾಡಗೌಡ ನೇತೃತ್ವದಲ್ಲಿ  ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ರಾಜ್ಯ ಸರ್ಕಾರ ಬೇಗನೆ ಮಹಾರಾಷ್ಟ್ರದ ಕಾಳಮ್ಮವಾಡಿ ಇಲ್ಲವೇ ಕೊಯ್ನೋ ಆಣೆಕಟ್ಟಿನಿಂದ ಕನಿಷ್ಠ ಮೂರು ಟಿಎಂಸಿ ನೀರನ್ನು ತರಿಸಿಕೊಳ್ಳಬೇಕು. ಸದ್ಯ ತಾತ್ಕಾಲಿಕವಾಗಿ  ಹಿಡಕಲ್ ಜಲಾಶಯದಿಂದ ಒಂದು ಟಿಎಂಸಿ ನೀರನ್ನು ಬಳಸಿಕೊಂಡು ತಾಲೂಕಿನ ನೀರಿನ ಸಮಸ್ಯೆಯನ್ನು ನೀಗಿಸಬೇಕು. ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ 7 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕೆಂದು ಒತ್ತಾಯಿಸಿದರು.
  ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ನಿತೀಶ ಪಾಟೀಲ ಮಾತನಾಡಿ ತಾಲೂಕಿನ ರೈತರ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ.  ಆದರೆ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಇರುವ ವ್ಯವಸ್ತೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಬೇಕಾಗಿದೆ. ಸಮಸ್ಯೆ ಪರಿಹಾರಕ್ಕಾಗಿ  ಶೀಘ್ರದಲ್ಲಿಯೇ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯನ್ನು ಆಯೋಜಿಸಿ ಪರಿಹಾರ ಸೂಚಿಸಲಾಗುವುದು. ನೆರೆಯ ಮಹಾರಾಷ್ಟ್ರದಿಂದ  ಕೃಷ್ಣಾ ನದಿಗೆ ಹರಿಸಬೇಕಾದ  ಮೂರು ಟಿಎಂಸಿ ನೀರಿನ ಕುರಿತು ರಾಜ್ಯ ಸರ್ಕಾರ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಎದುರಾಗುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಸಮಸ್ಯೆ ಆಗದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ತಾಲೂಕ ಆಡಳಿತಕ್ಕೆ ಸೂಚಿಸಲಾಗಿದೆ ಎಂದು ಹೇಳಿದರು.
 ಈಗಾಗಲೇ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ  ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಟ್ಯಾಂಕರ್ ಆರಂಭಿಸಲಾಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಅಥಣಿ ತಾಲೂಕಿನ 19 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಟ್ಯಾಂಕರ್ ಗಳನ್ನ ಆರಂಭಿಸಲಾಗಿದೆ ಎಂದು ಹೇಳಿದರು.
  ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಅವರ ಭಾಷಣ ಮುಗಿಯುತ್ತಿದ್ದಂತೆ ಎಲ್ಲ ಅಧಿಕಾರಿಗಳು ಸಭೆಯಿಂದ ಹೊರಟರು, ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು ಮತ್ತು ರೈತ ಮುಖಂಡರು ಅಧಿಕಾರಿಗಳ ನಡುವಿನ ಜಗಳ ಕಂಡು ಅಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ರೈತ ಮುಖಂಡ ಮಹದೇವ ಮಡಿವಾಳ ಮಾತನಾಡಿ  ಅಥಣಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ, ಇದಕ್ಕೆ ಸೂಕ್ತ ಪರಿಹಾರ ಸೂಚಿಸಲು ಬಂದಿರುವ ಜಿಲ್ಲಾಧಿಕಾರಿಗಳು, ಈ ರೀತಿ ಕಟಾಚಾರದ ಸಭೆಯನ್ನು ನಡೆಸಿ ತರಾತುರಿಯಲ್ಲಿ ಹೋಗುವುದು ಸರಿಯಲ್ಲ, ನಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಪಟ್ಟು ಹಿಡಿದು  ಜಿಲ್ಲಾಧಿಕಾರಿಗಳಿಗೆ ಧಿಕ್ಕಾರ ಕೂಗುತ್ತಾ  ಅವರ ವಾಹನಕ್ಕೆ ಮುತ್ತಿಗೆ ಹಾಕಲು ಮುಂದಾದರು. ಆಗ ಪೊಲೀಸ್ ಅಧಿಕಾರಿಗಳು ಮುಂದಾಗಿ ರೈತ ಮುಖಂಡರನ್ನು ತಡೆದರು. ಅಲ್ಲಿಂದ ಜಿಲ್ಲಾಧಿಕಾರಿಗಳು ಹೊರಟು ಹೋದರು.
ಈ ಸಭೆಯಲ್ಲಿ ಎಸ್. ಪಿ ಡಾ. ಭೀಮಾಶಂಕರ ಗುಳೆದ, ಚಿಕ್ಕೋಡಿ ಎಸಿ  ಮಹಿಬೂಬಿ, ನೀರಾವರಿ ಇಲಾಖೆ ಮುಖ್ಯ ಇಂಜನೀಯರ ಎಸ್.ಜಿ ಶ್ರೀನಿವಾಸ್ ಮತ್ತು ಪ್ರವಿಣ ಹುಣಸಿಕಟ್ಟಿ, ಅಥಣಿ ತಹಸೀಲ್ದಾರ ವಾಣಿ ಯು, ಬಿ. ವೈ. ಹೊಸಕೇರಿ, ಚುನಾವಣಾ ಅಧಿಕಾರಿ ಮಲ್ಲಿಕಾರ್ಜುನ,  ತಾ.ಪo.ಕಾರ್ಯ ನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ,  ಜಿ.ಪಂ ಇಂಜನೀಯರ ವೀರಣ್ಣ ವಾಲಿ, ಡಿವೈಎಸ್ಪಿ ಶ್ರೀಪಾದ ಜಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ  ಸೇರಿದಂತೆ  ತಾಲೂಕ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು  ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article