ಮಗುವಿನಲ್ಲಿ ನಿರ್ಜಲೀಕರಣ ತಡೆಗೆ ಹಾಲುಣಿಸಿ: ಡಾ.ಯಲ್ಲಾ ರಮೇಶಬಾಬು

MK HasiruKranti
ಮಗುವಿನಲ್ಲಿ ನಿರ್ಜಲೀಕರಣ ತಡೆಗೆ ಹಾಲುಣಿಸಿ: ಡಾ.ಯಲ್ಲಾ ರಮೇಶಬಾಬು
WhatsApp Group Join Now
Telegram Group Join Now

 

ಬಳ್ಳಾರಿ,ಮಾ.17

ಹೆರಿಗೆ ನಂತರದಲ್ಲಿ ತಾಯಂದಿರು ನವಜಾತ ಶಿಶುವಿಗೆ ಪದೇ ಪದೇ ಎದೆ ಹಾಲುಣಿಸುವ ಮೂಲಕ ಅಧಿಕ ಬಿಸಿಲಿನಿಂದ ಮಕ್ಕಳಲ್ಲಿ ಉಂಟಾಗುವ ನಿರ್ಜಲೀಕರಣವನ್ನು ತಡೆಯಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್‌ಬಾಬು ತಿಳಿಸಿದ್ದಾರೆ.

ಜಿಲ್ಲೆಯ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸಾರ್ವಜನಿಕ ಜಾಗೃತಿ ಮೂಡಿಸಿದ ಅವರು, ಸಾಮಾನ್ಯವಾಗಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಬಳ್ಳಾರಿ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಿಸಿಲಿನ ಪ್ರಮಾಣ ೪೦ ಡಿಗ್ರಿ ಮೇಲ್ಪಟ್ಟು ದಾಖಲಾಗುತ್ತದೆ. ಮುಂಜಾಗೃತ ಕ್ರಮವಾಗಿ ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬೇಸಿಗೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಎಲ್ಲ ಆಸ್ಪತ್ರೆಯ ಸಿಬ್ಬಂದಿಗೆ ಮಾಹಿತಿ ನೀಡಿ ಸಾರ್ವಜನಿಕರಿಗೆ ವ್ಯಾಪಕ ಪ್ರಚಾರ ಕೈಗೊಳ್ಳಲಾಗುತ್ತಿದೆ. ಇದರ ಭಾಗವಾಗಿ ನವಜಾತ ಶಿಶುಗಳು ಮತ್ತು ಮಕ್ಕಳ ಹಾರೈಕೆಯಲ್ಲೂ  ತಾಯಂದಿರು ಮತ್ತು ಪಾಲಕರು ಹೆಚ್ಚಿನ ಜಾಗೃತಿ ವಹಿಸುವುದು ಅವಶ್ಯಕತೆ ಇದೆ. ವಯಸ್ಕರು, ಸಾಮಾನ್ಯ ಮನುಷ್ಯನಿಗಿಂತ ಮಕ್ಕಳಲ್ಲಿ ನಿರ್ಜಲೀಕರಣ ಪ್ರಮಾಣ ಹೆಚ್ಚುತ್ತದೆ. ಹೀಗಾಗಿ ತಾಯಂದಿರು ಮಕ್ಕಳಿಗೆ ಪದೇ ಪದೇ ಎದೆ ಹಾಲುಣಿಸಬೇಕು ಎಂದರು.

ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಹೆರಿಗೆಯಾಗುವ ಅದರಲ್ಲೂ ಮೊದಲ ಮಗುವಿಗೆ ಜನನ ನೀಡುವ ತಾಯಿಗೆ ತನ್ನ ನವಜಾತ ಶಿಶುವಿಗೆ ಹೆರಿಗೆ ನಂತರದಲ್ಲಿ ನಿಯಮಿತವಾಗಿ ಹಾಲುಣಿಸುವ ಅಭ್ಯಾಸವು ಗೊತ್ತಿಲ್ಲದೇ ಕೆಲವು ನವಜಾತ ಶಿಶುವುಗಳಲ್ಲಿ ನಿರ್ಜಲೀಕರಣ ಕಂಡುಬರುವ ಸಾಧ್ಯತೆಗಳಿವೆ. ಅದರಲ್ಲೂ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆಯಾದಲ್ಲಿ ಇಂತಹ ಸಾಧ್ಯತೆಗಳು ಹೆಚ್ಚು. ಅಂತಹ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಚೊಚ್ಚಲು ಹೆರಿಗೆಯಾದ ಬಾಣಂತಿಯರಿಗೆ ಹೆರಿಗೆ ನಂತರದಲ್ಲಿ ಪ್ರತಿ ಒಂದರಿಂದ 2 ಗಂಟೆಯೊಳಗಡೆ ಶಿಶುವಿಗೆ ತಪ್ಪದೇ ಎದೆ ಹಾಲುಣಿಸಬೇಕು ಮತ್ತು ಎದೆ ಹಾಲಿನಲ್ಲಿ ಶೇ.70 ರಷ್ಟು ನೀರಿನ ಅಂಶವಿರುವದರಿAದ ಮಗುವಿಗೆ ಉಂಟಾಗಬಹುದಾದ ನಿರ್ಜಲೀಕರಣವನ್ನು ತಡೆಗಟ್ಟುತ್ತದೆ. 6 ತಿಂಗಳವರೆಗೆ ಮಗುವಿಗೆ ತಾಯಿಯ ಎದೆಹಾಲನ್ನು ಮಾತ್ರ ಕೊಡಬೇಕು. ಅಲ್ಲದೇ ಮಗುವಿಗೆ ಬಿಸಿಲಿನ ತಾಪಮಾನದಿಂದ ರಕ್ಷಿಸಲು ತೆಳುವಾದ ಹತ್ತಿಬಟ್ಟೆಯನ್ನು ಮಾತ್ರ ಹಾಕಬೇಕು. 2 ರಿಂದ 3 ಬಟ್ಟೆಗಳನ್ನು ಅಥವಾ ಹೊದಿಕೆಯನ್ನು ಮಕ್ಕಳಿಗೆ ಹಾಕದಂತೆ ಕಾಳಜಿ ವಹಿಸಬೇಕು ಎಂದರು.

ಇನ್ನು ಸಾರ್ವಜನಿಕರು ಕೂಡ ಬಿಸಿಲಿನಿಂದ ರಕ್ಷಣೆ ಮೊರೆ ಹೋಗಬೇಕು. ಮಧ್ಯಾಹ್ನ 01 ಗಂಟೆಯಿಂದ ಸಂಜೆ 04 ಗಂಟೆಯವರೆಗೆ ಆದಷ್ಟು ಮನೆಯಲ್ಲಿಯೇ ಇರಲು ಪ್ರಯತ್ನಿಸಬೇಕು. ಒಂದು ವೇಳೆ ಮನೆಯಿಂದ ಹೊರಗೆ ಬರುವ ಅಗತ್ಯವಿದ್ದರೆ ಛತ್ರಿ ಹಾಗೂ ನೀರಿನ ಬಾಟೆಲ್‌ನೊಂದಿಗೆ ಬರುವಂತೆ ಡಿಎಚ್‌ಒ ಮನವಿ ಮಾಡಿದ್ದಾರೆ.

WhatsApp Group Join Now
Telegram Group Join Now
Share This Article