ಸಂಕೇಶ್ವರ : ಪವನ ಕಣಗಲಿ ಫೌಂಡೇಶನ್ ಪ್ರತಿವರ್ಷ ಗಾಳಿಪಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಮೀಣ ಕಲೆ, ಕ್ರೀಡೆಗಳಿಗೆ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಎಸ್‌ಡಿವಿಎಸ್ ಸಂಘದ ಅನ್ನಪೂರ್ಣಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜಮೆಂಟ್ ಮತ್ತು ರಿಸರ್ಚ್ ಪ್ರಾಚಾರ್ಯೆ ಡಾ. ವಿದ್ಯಾ ಸ್ವಾಮಿ ಹೇಳಿದರು.
ಪಟ್ಟಣದ ಬ್ರಿಲಿಯಂಟ್ ಸಿಬಿಎಸ್‌ಇ ಶಾಲೆಯಲ್ಲಿ ಜರುಗಿದ 6ನೇ ವರ್ಷದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಗಾಳಿಪಟ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಮಕ್ಕಳ ತಜ್ಞವೈದ್ಯೆ ಡಾ. ಪ್ರತಿಭಾ ಪಟ್ಟಣಶೆಟ್ಟಿ ಮಾತನಾಡಿ ಇಂದಿನ ಮಕ್ಕಳು ಮೊಬೈಲ್ ಗೇಮ್‌ನಲ್ಲಿ ಕಳೆದುಹೋಗುತ್ತಿರುವುದು ದೌರ್ಭಾಗ್ಯ. ಮಕ್ಕಳ ಚೈತನ್ಯ ನಾಲ್ಕು ಗೋಡೆಯೊಳಗೆ ಟಿವಿ, ಮೊಬೈಲ್‌ಗಳಲ್ಲಿ ಕಳೆದುಹೋಗದೆ ಪ್ರಕೃತಿಯೊಂದಿಗೆ ಬೆರೆತು, ಆರೋಗ್ಯಕರವಾಗಿ ಬೆಳೆಯಬೇಕು
ಎಂದು ಸಲಹೆ ನೀಡಿದರು.
ಡಾ. ದೀಪ್ತಿ ಪಾಟೀಲ ಮಾತನಾಡಿ ಉತ್ತರಾಯಣ ಕಾಲದಲ್ಲಿ ಬಾನೆತ್ತರಕ್ಕೆ ಹಾರುವ ಗಾಳಿಪಟಗಳು ಮಕ್ಕಳಲ್ಲಿ ಆಕಾಶಕ್ಕೆ ಹಾರುವ ಆಕಾಂಕ್ಷೆ ಗರಿಗೆದರುವಂತೆ ಮಾಡುತ್ತವೆ. ಅಂತಹ ಗಾಳಿಪಟ ಹಾರುವಿಕೆ ಪರಿಕಲ್ಪನೆ ಸ್ಪರ್ಧೆ ರೂಪ ಕೊಟ್ಟು ರೂಪಿಸಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಚಿತ್ರಕಲೆ ಕ್ಯಾನವಾಸ್ ಹಲಗೆ ಮೇಲೆ ಮಕ್ಕಳ ಕೈಯಿಂದ ಬಣ್ಣಗಳ ಚಿತ್ತಾರ ಹಾಗೂ ಅತಿಥಿಗಳಿಗೆ ಹಸ್ತಾಕ್ಷರು ಬರಹ ಬರೆಯುವ ಮೂಲಕ ಗಾಳಿಪಟ ಚಿತ್ರಕಲೆ ಹಾಗೂ ಭಾಷಣ ಸ್ಪರ್ಧೆಗೆ ಚಾಲನೆ ನೀಡಲಾಯಿತು.
ನೀಲಿಮಾ ಪಟ್ಟಣಶೆಟ್ಟಿ ಅತಿಥಿಯಾಗಿ ಭಾಗವಹಿಸಿದ್ದರು. ಆಯೋಜಕಿ ಸುಮಲತಾ ಕಣಗಲಿ, ಮುಖ್ಯ ಶಿಕ್ಷಕರಾದ ಎಸ್.ಡಿ. ನಾಯಿಕ, ನಿರ್ಣಾಯಕರಾದ ಎ. ಸಿ. ಬಿಜಾಪುರೆ, ಸಂಗಮೇಶ ಕಂಗಳ, ಎಸ್. ಆರ್. ಚುನಮುರಿ, ಆರ್. ಐ. ಕುರಬೇಟ, ಪ್ರೀತಮ್ ನಿಡಸೋಸಿ, ಸ್ಪೂರ್ತಿ ಪಾಟೀಲ, ಸಂತೋಷ ತೇರಣಿಮಠ, ವಿಜಯ ಹಂದಿಗೂಡಮಠ, ಶಶಾಂಕ ಮಾಳಿ ಹಾಜರಿದ್ದರು.
ನಾಳೆ ಮಂಗಳವಾರ ಜ.14 ರಂದು ಜಿಲ್ಲಾಮಟ್ಟದ ಗಾಳಿಪಟ ಹಾರಿಸುವ ಮತ್ತು ತಯಾರಿಸುವ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಗಳಾಗಿ ಆರ್.ಜೆ ಮಾಧುರಿ ನಾಯಕ್, ಅಂತರರಾಷ್ಟ್ರೀಯ ಬೂಮ್‌ರಾಂಗ್ ಪ್ಲೇಯರ್ ಪ್ರಸನ್ನ ಮಿಶ್ರಕೋಟಿ ಪಾಲ್ಗೊಳ್ಳಲಿದ್ದಾರೆ.