ಶಸ್ತ್ರಚಿಕಿತ್ಸಾ ತಜ್ಞರಿಗೆ ತರಬೇತಿಯ ಅಗತ್ಯವಿದೆ: ಡಾ.ವೀರಣ್ಣ ಚರಂತಿಮಠ

Sandeep Malannavar
ಶಸ್ತ್ರಚಿಕಿತ್ಸಾ ತಜ್ಞರಿಗೆ ತರಬೇತಿಯ ಅಗತ್ಯವಿದೆ: ಡಾ.ವೀರಣ್ಣ ಚರಂತಿಮಠ
WhatsApp Group Join Now
Telegram Group Join Now
ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನಲ್ಲಿ ಮೃತಶರೀರ ಆಧಾರಿತ  ಶಸ್ತ್ರಚಿಕಿತ್ಸಾ ಕಾರ್ಯಾಗಾರ
ಬಾಗಲಕೋಟೆ- ವೈದ್ಯಕೀಯ ಕ್ಷೇತ್ರದಲ್ಲಿ ಶಸ್ತ್ರಚಿಕಿತ್ಸೆ ಅತ್ಯಂತ ಸೂಕ್ಷ್ಮವಾದ ಕಾರ್ಯವಿಧಾನವಾಗಿದೆ. ಈ ಕ್ಷೇತ್ರದಲ್ಲಿ ವೈದ್ಯರು ಪರಿಣತಿಯನ್ನು ಸಾಧಿಸಲು ಅವರಿಗೆ ಹೆಚ್ಚಿನ ತರಬೇತಿಯ ಅಗತ್ಯವಿದೆ ಎಂದು ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಸಿ.ಚರಂತಿಮಠ ಅವರು ಅಭಿಪ್ರಾಯಪಟ್ಟರು.
ದಿನಾಂಕ ೨೪.೦೧.೨೦೨೬ ಶನಿವಾರದಂದು ಬಿ.ವಿ.ವಿ ಸಂಘದ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನಲ್ಲಿ ಆಯೋಜಿಸಿದ್ದ ಮೃತಶರೀರ ಆಧಾರಿತ ಶಸ್ತ್ರಚಿಕಿತ್ಸಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಮೃತಶರೀರವನ್ನು ಶಸ್ತ್ರಚಿಕಿತ್ಸಾ ತರಬೇತಿಗಾಗಿ ಉಪಯೋಗಿಸುತ್ತಿರುವುದು ಹೊಸ ವಿಧಾನವಾಗಿದೆ. ಈ ವಿಧಾನವು ಶಸ್ತ್ರಚಿಕಿತ್ಸಾ ತಜ್ಞರು ಪರಿಣತಿ ಹೊಂದಲು ಉಪಯುಕ್ತವಾಗಿದೆ. ತಲೆಬುರುಡೆ ಆಧಾರಿತ ಶಸ್ತ್ರಚಿಕಿತ್ಸೆ ಕಾರ್ಯಾಗಾರವು ಉತ್ತರ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಆಯೋಜಿಸುತ್ತಿರುವುದು ಅಭಿಮಾನದ ಸಂಗತಿ. ಕರ್ನಾಟಕ ಮಾತ್ರವಲ್ಲದೆ ಬೇರೆ ರಾಜ್ಯಗಳ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯರು ಇಲ್ಲಿ ಶಸ್ತ್ರಚಿಕಿತ್ಸಾ ತರಬೇತಿ ಪಡೆಯುತ್ತಿರುವರು ಎಂದರು.
ಕುಮಾರಿ ಅಂಜಲಿ ಮತ್ತು ರಿಚಾ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮೆಡಿಕಲ್ ಕಾಲೇಜಿನ ಪ್ರಾಚಾರ್ಯೆ ಡಾ.ಭುವನೇಶ್ವರಿ ಯಳಮಲಿ ಅವರು ಅತಿಥಿಗಳನ್ನು ಸ್ವಾಗತಿಸಿ ಮೃತಶರೀರ ಆಧಾರಿತ ಶಸ್ತ್ರಚಿಕಿತ್ಸಾ ಕೌಶಲ ಪ್ರಯೋಗಾಲಯದ ಕುರಿತು ಮಾತನಾಡಿದರು. ಅನಾಟಮಿ ವಿಭಾಗದ ಮುಖ್ಯಸ್ಥ ಡಾ.ಸಂಜೀವ ಕೊಳಗಿ ಕಾರ್ಯಾಗಾರದ ಕುರಿತು ಪ್ರಾಸ್ತಾವಿಕ ಮಾತನಾಡಿ ೫೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸ್ಥಾಪಿಸಲಾದ ಮೃತಶರೀರ ಆಧಾರಿತ ಶಸ್ತ್ರಚಿಕಿತ್ಸಾ ಕೌಶಲ ಪ್ರಯೋಗಾಲಯದಲ್ಲಿ ಇದುವರೆಗೆ ೨೦ ಕ್ಕೂ ಹೆಚ್ಚು ಶಸ್ತ್ರಚಿಕಿತ್ಸಾ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ. ತಲೆಬುರುಡೆಯ ಕೆಳಭಾಗವು ಬೆನ್ನುಹುರಿ, ಅನೇಕ ರಕ್ತನಾಳಗಳು ಮತ್ತು ನರಗಳು ಹಾದುಹೋಗುವ ತುಂಬ ಸಂಕೀರ್ಣ ಮತ್ತು ಸೂಕ್ಷ್ಮ ಭಾಗವಾಗಿದೆ. ಈ ಕಾರ್ಯಾಗಾರದಲ್ಲಿ ಮೃತಶರೀರದ ತಲೆಬುರುಡೆಯ ಕೆಳಭಾಗದಲ್ಲಿ ಶಸ್ತ್ರಚಿಕಿತ್ಸೆ ತರಬೇತಿ ನೀಡಲಾಗುತ್ತಿದೆ ಎಂದರು.
ಈ ಶಸ್ತ್ರಚಿಕಿತ್ಸಾ ಕಾರ್ಯಾಗಾರವನ್ನು ಎಸ್.ಎನ್.ಮೆಡಿಕಲ್ ಕಾಲೇಜಿನ ಅನಾಟಮಿ ಮತ್ತು ಇ.ಎನ್.ಟಿ ವಿಭಾಗ ಹಾಗೂ ಹುಬ್ಬಳ್ಳಿಯ ದಂಡಿ ಅಂತರರಾಷ್ಟ್ರೀಯ ಕಲಿಕಾ ಕೇಂದ್ರ ಇವುಗಳ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಕಾರ್ಯಾಗಾರದಲ್ಲಿ ವಿವಿಧ ರಾಜ್ಯಗಳಿಂದ ಮತ್ತು ನೆರೆಯ ರಾಷ್ಟ್ರಗಳಿಂದ ಸುಮಾರು ೫೦ ಶಸ್ತ್ರಚಿಕಿತ್ಸಾ ತಜ್ಞರು ತರಬೇತಿಗಾಗಿ ಪಾಲ್ಗೊಂಡಿದ್ದರು. ಒಟ್ಟು ಐದು ದಿನಗಳ ಕಾಲ ಈ ಕಾರ್ಯಾಗಾರ ನಡೆಯಲಿದೆ. ರಾಜ್ಯದ ವಿವಿಧ ವೈದ್ಯಕೀಯ ಸಂಸ್ಥೆಗಳ ಇ.ಎನ್.ಟಿ ತಜ್ಞ ವೈದ್ಯರು ಮತ್ತು ಎಸ್.ಎನ್.ಮೆಡಿಕಲ್ ಕಾಲೇಜಿನ ಡಾ.ಸಂಜೀವ ಕೊಳಗಿ ಹಾಗೂ ಡಾ.ಸಿ.ಎಸ್.ಹಿರೇಮಠ ಸಂಪನ್ಮೂಲ ವ್ಯಕ್ತಿಗಳಾಗಿ ಶಿಬಿರಾರ್ಥಿಗಳಿಗೆ ತರಬೇತಿ ನೀಡಲಿರುವರು.
ಅತಿಥಿಗಳಾದ ಹುಬ್ಬಳ್ಳಿ ಕರ್ನಾಟಕ ಮೆಡಿಕಲ್ ಕಾಲೇಜಿನ ಇ.ಎನ್.ಟಿ ತಜ್ಞರಾದ ಡಾ.ರವೀಂದ್ರ ಗದಗ ಮತ್ತು ಡಾ.ಮಂಜುನಾಥ ದಂಡಿ ಎಸ್.ಎನ್.ಮೆಡಿಕಲ್ ಕಾಲೇಜಿನಲ್ಲಿರುವ ಮೃತಶರೀರ ಆಧಾರಿತ ಶಸ್ತ್ರಚಿಕಿತ್ಸಾ ಕೌಶಲ ಪ್ರಯೋಗಾಲಯ ಇಡೀ ಭಾರತದಲ್ಲೇ ಅತ್ಯುತ್ತಮ ಪ್ರಯೋಗಾಲಯವಾಗಿದೆ. ದೇಶ ಮತ್ತು ವಿದೇಶಗಳಿಂದ ವೈದ್ಯರು ಇಲ್ಲಿ ತರಬೇತಿ ಪಡೆಯಲು ಬರುತ್ತಿರುವುದು ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ಈ ಪ್ರಯೋಗಾಲಯಕ್ಕೆ ಅಂತರರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆ ದೊರೆಯಲಿದೆ ಎಂದರು. ಕಾಲೇಜಿನ ಪರವಾಗಿ ಅತಿಥಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಇ.ಎನ್.ಟಿ ವಿಭಾಗದ ಮುಖ್ಯಸ್ಥ ಡಾ.ಸಿ.ಎಸ್.ಹಿರೇಮಠ ವಂದಿಸಿದರು.
ವೇದಿಕೆಯಲ್ಲಿ ಬಿ.ವಿ.ವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಎನ್.ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಮ್.ಸಜ್ಜನ (ಬೇವೂರ) ಮತ್ತು ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು, ಮೆಡಿಕಲ್ ಕಾಲೇಜಿನ ಅನಾಟಮಿ, ಇ.ಎನ್.ಟಿ ಮತ್ತು ವಿವಿಧ ವಿಭಾಗಗಳ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article