ಡೆಂಟಿಸ್ಟ್ ಶೃಂಗಸಭೆ-2025 ಸಮಾವೇಶದಲ್ಲಿ ಕರೆ ನೀಡಿದ ವೈದ್ಯಕೀಯ ಶಿಕ್ಷಣ ಸಚಿವರು
ಬೆಂಗಳೂರು, ಆ. 30: ದಂತ ವೈದ್ಯಕೀಯ ಕ್ಷೇತ್ರಕ್ಕೆ ಅತ್ಯುತ್ತಮ ಭವಿಷ್ಯವಿದೆ. ಇದರಿಂದ ಸಾಕಷ್ಟು ಜನರಿಗೆ ಉತ್ತಮ ದಂತ ಆರೋಗ್ಯ ಸೇವೆ ನೀಡಬಹುದು. ಆದರೆ ಗ್ರಾಮೀಣ ಭಾಗದಲ್ಲಿ ಅದರಲ್ಲೂ ಹಳ್ಳಿಗಳಲ್ಲಿ ಈ ಕ್ಷೇತ್ರ ಹೆಚ್ಚು ತಲುಪದಿರುವುದು ಆತಂಕದ ವಿಷಯ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಮುಂದಿನ ದಿನಗಳಲ್ಲಿ ಉತ್ತಮ ಯೋಜನೆ ರೂಪಿಸಲಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಆರ್ ಪಾಟೀಲ್ ತಿಳಿಸಿದ್ದಾರೆ
ಸರ್ಕಾರಿ ದಂತ ವೈದ್ಯಕೀಯ ಕಾಲೇಜಿನ ಆವರಣದಲ್ಲಿರುವ ಡಾ. ಎಸ್. ರಾಮಚಂದ್ರ ಆಡಿಟೋರಿಯಂನಲ್ಲಿ ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಆಯೋಜಿಸಿದ ಡೆಂಟಿಸ್ಟ್ ಶೃಂಗಸಭೆ-2025 ರಲ್ಲಿ ಸಚಿವರು ಭಾಷಣ ಮಾಡಿದರು.
ದಂತವೈದ್ಯಕೀಯ ಎನ್ನುವುದು ಅತ್ಯಂತ ಸೂಕ್ಷ್ಮ ಮತ್ತು ನಿಖರತೆ ಹೆಚ್ಚು ಕೋರುವ ವಿಷಯವಾಗಿದೆ. ದಂತ ಆರೋಗ್ಯದ ಬಗ್ಗೆ ಜನಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಹಲ್ಲು ನೋವು ಬಂದರೆ ಅದನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ಇದು ಎಲ್ಲರಿಗೂ ಅನುಭವಕ್ಕೆ ಬಂದಿರಬಹುದು. ಇದಕ್ಕೆ ಚಿಕಿತ್ಸೆ ನೀಡುವ ದಂತ ವೈದ್ಯರು ಎಂದಿಗೂ ಸದಾ ಸ್ಮರಣೀಯರು ಎಂದು ಸಚಿವರು ತಿಳಿಸಿದರು.
ನಗರ, ಜಿಲ್ಲಾ, ತಾಲೂಕು ಮಟ್ಟದಲ್ಲಿ ದಂತ ವೈದ್ಯ ಸೇವೆ ಲಭ್ಯವಾಗುತ್ತಿದೆ. ಆದರೆ ಹಳ್ಳಿಗಳಲ್ಲಿ ಇದು ತಲುಪುತ್ತಿಲ್ಲ. ಹಲ್ಲು, ಒಸಡಿನ ಆರೋಗ್ಯ ಕಾಪಾಡಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಿ ದಂತ ವೈದ್ಯ ಸೇವೆಯನ್ನು ಹಳ್ಳಿ ಹಳ್ಳಿಗೂ ಕೊಂಡೊಯ್ಯಬೇಕಾಗಿದೆ ಎಂದು ಡಾ. ಪಾಟೀಲ್ ವಿವರಿಸಿದರು.
ಯುವ ದಂತ ವೈದ್ಯರ ಮೇಲೆ ಈ ಜವಾಬ್ದಾರಿ ಹೆಚ್ಚಾಗಿದೆ. ಈಗ ತಾನೇ ಕಾಲೇನಿಂದ ದಂತ ವೈದ್ಯ ಎಂಬ ಬಿರುದು ಪಡೆದು ಹೋಗುವವರು ಎಲ್ಲ ವರ್ಗದ ಜನರಿಗೆ ಇದನ್ನು ತಲುಪಿಸಬೇಕಾಗಿದೆ. ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ಸಚಿವರು ಸಲಹೆ ನೀಡಿದರು.
ನಮ್ಮ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಕೆಲವು ಮಹತ್ವದ ಯೋಜನೆ ರೂಪಿಸುತ್ತಿದೆ. ಹೊಸ ಡೆಂಟಲ್ ಕೌನ್ಸಿಲ್ ರಚನೆ ಮಾಡಲು ಚಿಂತನೆ ನಡೆದಿದಿದೆ. ರಾಷ್ಟ್ರೀಯ ದಂತ ಆಯೋಗ ಮಾರ್ಗಸೂಚಿಯಡಿ ರಾಜ್ಯದ ಡೆಂಟಲ್ ಕೌನ್ಸಿಲ್ ಕಾರ್ಯ ನಿರ್ವಹಿಸಲಿದೆ ಎಂದರು.
108 ಅಡಿ ಉದ್ದದ ತ್ರಿವರ್ಣ ಧ್ವಜಸ್ಥಂಭ ಉದ್ಘಾಟನೆ
ಇದೇ ಸಂದರ್ಭದಲ್ಲಿ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ 108 ಅಡಿ ತ್ರಿವರ್ಣ ಧ್ವಜಸ್ತಂಭವನ್ನು ಸಚಿವರು ಉದ್ಘಾಟಿಸಿದರು.
1986ನೇ ಬ್ಯಾಚ್‌ನ ವಿದ್ಯಾರ್ಥಿಗಳ ಕೊಡುಗೆ ಇದಾಗಿದೆ. ವಿಕ್ಟೋರಿಯಾ ಆಸ್ಪತ್ರೆ 2025 ರಲ್ಲಿ 125 ವರ್ಷಗಳನ್ನು ಪೂರೈಸುತ್ತಿದೆ. ಹಲವು ದಶಕಗಳಿಂದಲೂ ಅತ್ಯುತ್ತಮ, ಅರ್ಥಪೂರ್ಣ ಮತ್ತು ಸ್ಮರಣೀಯ ಸೇವೆಯನ್ನು ಈ ಸಂಸ್ಥೆ ನೀಡಿದೆ.
ದಕ್ಷಿಣ ಭಾರತದಲ್ಲಿರುವ ಮೆಡಿಕಲ್ ಕಾಲೇಜುಗಳಲ್ಲಿ ಇದು ಅತ್ಯಂತ ಎತ್ತರದ ಧ್ವಜಸ್ಥಂಭವಾಗಿದೆ. ಇಡೀ ದೇಶದಲ್ಲಿ ಮೂರನೇ ಅತಿ ದೊಡ್ಡ ಧ್ವಜಸ್ಥಂಭವಾಗಿದೆ. ಮೊದಲೆರಡು ಸ್ಥಾನದಲ್ಲಿ ನವದೆಹಲಿಯ ಏಮ್ಸ್ ಮತ್ತು ಪುಣೆಯ ಎಎಫ್‌ಎಂಸಿ ಇದೆ.
ಇದೇ ಸಂದರ್ಭದಲ್ಲಿ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಮೂರು ಮಾಡ್ಯುಲರ್ ಆಪರೇಷನ್ ಥಿಯೇಟರ್‌ಗಳನ್ನು ಸಚಿವರು ಉದ್ಘಾಟಿಸಿದರು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಡಾ.ಬಿ.ಎಲ್. ಸುಜಾತಾ ರಾಥೋಡ್, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಮತ್ತು ನಿರ್ದೇಶಕಿ
ಡಾ.ಎಸ್.ಟಿ. ಕಾವ್ಯ, ಸರ್ಕಾರಿ ದಂತ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ.ಗಿರೀಶ್ ಗಿರಡ್ಡಿ, ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ದೀಪಕ್ ಮತ್ತು ವಾಣಿ ವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಸವಿತಾ ಉಪಸ್ಥಿತರಿದ್ದರು.