ಬೆಂಗಳೂರು : ಗುರುವಾರ ಲಿಂಗೈಕ್ಯರಾದ ಕಲಬುರ್ಗಿಯ ಶ್ರೀಶರಣ ಸಂಸ್ಥಾನದ ಡಾ.ಶರಣಬಸವಪ್ಪ ಅಪ್ಪ ಅವರ ಅಗಲಿಕೆಗೆ ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಕಂಬನಿ ಮಿಡಿದಿದ್ದಾರೆ.
ಕಲಬುರ್ಗಿ ಶರಣ ಸಂಸ್ಥಾನದ ಕರ್ತೃಪುರುಷರಾದ ಶ್ರೀಶರಣಬಸಪ್ಪನವರು ಪಂಚಪೀಠಗಳಲ್ಲಿ ಒಂದಾದ ಉಜ್ಜಯಿನಿ ಪೀಠದ ಶಾಖಾಮಠ ಕಲಿಕೇರಿ ಹಿರೇಮಠದ ಶ್ರೀಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಶಿಷ್ಯರಾಗಿದ್ದರು. ಕರ್ತೃಪುರುಷರಾದ ಶ್ರೀಶರಣಬಸಪ್ಪನವರು ತಮ್ಮ ಗುರುವರ್ಯರನ್ನು ಅವರ ಜೀವಮಾನದುದ್ದಕ್ಕೂ ಅರಘಳಿಗೆಯೂ ಅಗಲಿ ಇರಲಿಲ್ಲ. ಕಲಬುರ್ಗಿಯ ಶ್ರೀಶರಣ ಸಂಸ್ಥಾನದÀಲ್ಲಿ ಗುರು-ಶಿಷ್ಯರಿಬ್ಬರೂ ನಿತ್ಯದಲ್ಲಿ ಕೂಡಿಯೇ ಪೂಜಿಸಿಕೊಳ್ಳುತ್ತಿದ್ದಾರೆ. ಅವರ ಭಾವಚಿತ್ರದಲ್ಲಿಯೂ ಗುರು-ಶಿಷ್ಯರು ಶಾಶ್ವತವಾಗಿದ್ದಾರೆ. ವೀರಶೈವ-ಲಿಂಗಾಯತ ಧರ್ಮದ ಗುರು-ಶಿಷ್ಯ ಪರಂಪರೆಯನ್ನು ಆನೂಚಾನವಾಗಿ ಮುನ್ನಡೆಸಿಕೊಂಡು ಬಂದಿದ್ದ ಡಾ.ಶರಣಬಸವಪ್ಪ ಅಪ್ಪ ಅವರು ತಮ್ಮ ಉತ್ತರಾಧಿಕಾರಿ ಕಲಬುರ್ಗಿ ಶ್ರೀಶರಣ ಸಂಸ್ಥಾನದ ೯ನೆಯ ಪೀಠಾಧಿಪತಿಯಾಗಿ ತಮ್ಮ ಸುಪುತ್ರ ದೊಡ್ಡಬಸವಪ್ಪ ಅಪ್ಪ ಅವರಿಗೆ ಪರಂಪರೆಯ ಮೂಲ ಸಂಸ್ಕಾರಗಳನ್ನು ರೂಢಿಸಿದ್ದಾರೆ.
ದಾಸೋಹ ಸೇವೆಗೆ ಹೆಸರು ಮಾಡಿದ್ದ ಡಾ.ಶರಣಬಸವಪ್ಪ ಅಪ್ಪ ಅವರು ಪೂರ್ವಪ್ರಾಥಮಿಕ ಶಾಲೆಯಿಂದ ಮೊದಲ್ಗೊಂಡು ವಿಶ್ವವಿದ್ಯಾಲಯದವರೆಗೆ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವ ಮೂಲಕ ವಿದ್ಯಾವಿಕಾಸಕ್ಕೆ ನಿರಂತರ ಶ್ರಮಿಸಿದ್ದರು. ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿ ಶ್ಲಾö್ಯಘನೀಯ ಕಾರ್ಯಮಾಡಿದ್ದು, ಇಹಲೋಕ ತ್ಯಜಿಸಿರುವ ಡಾ.ಶರಣಬಸವಪ್ಪ ಅಪ್ಪ ಅವರ ಆತ್ಮಕ್ಕೆ ಪಾರ್ವತಿ-ಪರಮೇಶ್ವರರು ಹಾಗೂ ಶ್ರೀಜಗದ್ಗುರು ಪಂಚಾಚಾರ್ಯರು ಚಿರಶಾಂತಿಯನ್ನು ಅನುಗ್ರಹಿಸಲೆಂದು ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.