ಸಹಕಾರ ಸಂಘದಲ್ಲಿ  ಸೇವಾ ಮನೋಭಾವ ಮುಖ್ಯ :  ಡಾ. ಸಂಜಯ ಹೊಸಮಠ

Ravi Talawar
ಸಹಕಾರ ಸಂಘದಲ್ಲಿ  ಸೇವಾ ಮನೋಭಾವ ಮುಖ್ಯ :  ಡಾ. ಸಂಜಯ ಹೊಸಮಠ
WhatsApp Group Join Now
Telegram Group Join Now
ಬೆಳಗಾವಿ: ಸಹಕಾರ ಸಂಸ್ಥೆ ಬೆಳೆಯಬೇಕಾದರೆ ಸೇವಾ ಮನೋಭಾವ ಹಾಗೂ ಅದನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿರಬೇಕು. ಅಚ್ಚುಕಟ್ಟಾದ ವ್ಯವಹಾರ ಇಟ್ಟುಕೊಂಡು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ರಾಜ್ಯ ಸಹಕಾರ ಪತ್ತಿನ ಸಂಘದ ನಿರ್ದೇಶಕ ಡಾ. ಸಂಜಯ ಹೊಸಮಠ ಅಭಿಪ್ರಾಯಪಟ್ಟರು.

ನಗರದ ಭಡಕಲ್ ಗಲ್ಲಿಯ ಶ್ರೀ ಬನಶಂಕರಿ ದೇವಸ್ಥಾನದ ಸಭಾಗೃಹದಲ್ಲಿ ರವಿವಾರ ನಡೆದ ಗುರು ವಿವೇಕಾನಂದ ವಿವಿಧೋದ್ದೇಶಗಳ ಸಹಕಾರಿ ಸಂಘದ 13ನೇ ವಾರ್ಷಿಕ ಸಾಮಾನ್ಯ ಸಭೆ ಹಾಗೂ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ಕ್ಷೇತ್ರದಲ್ಲಿ ಬೆಳಗಾವಿ ಮೊದಲ ಸ್ಥಾನ ಪಡೆದುಕೊಂಡಿದ್ದು, ಸಹಕಾರ ಸಂಘಗಳು ಬೆಳೆಯಬೇಕಾದರೆ ಅದರ ಆಡಳಿತ ಮಂಡಳಿ, ಸಿಬ್ಬಂದಿ ಅತ್ಯಂತ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಬೇಕು. ಹಣಕಾಸಿನ ವ್ಯವಹಾರ ಚೆನ್ನಾಗಿದ್ದರೆ ಜನರು ನಮ್ಮ ಬಳಿ ಬರುತ್ತಾರೆ. ಸಹಕಾರ ಸಂಘದಲ್ಲಿ ನಂಬಿಕೆ-ವಿಶ್ವಾಸ ಮುಖ್ಯ. ಅದನ್ನು ಕಾಪಿಟ್ಟುಕೊಂಡು ಸಾಗಬೇಕು. ಸಹಕಾರ ರಂಗವು ದೇಶದ ಆರ್ಥಿಕತೆಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ ಎಂದರು.

ಸಮಾಜ ನಮಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾವು ಏನನ್ನು ಕೊಡಬಲ್ಲೇವು ಎಂಬ ಅರಿವು ನಮ್ಮಲ್ಲಿರಬೇಕು. ವಿದ್ಯಾರ್ಥಿಗಳು ತಾವು ಕಲಿತ ಶಾಲೆ, ಶಿಕ್ಷಕರು, ಊರು, ಸಹಾಯ ಮಾಡಿದವರನ್ನು ಮರೆಯಬಾರದು. ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಹುದ್ದೆ ಪಡೆದು ಸತ್ಪ್ರಜೆಗಳಾಗಬೇಕು ಎಂದರು.

ಗುರು ವಿವೇಕಾನಂದ ಸಹಕಾರ ಸಂಘ ಕಡಿಮೆ ವರ್ಷದಲ್ಲಿಯೇ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ವಿವೇಕಾನಂದರ ತತ್ವ ಸಿದ್ಧಾಂತ ಇಟ್ಟುಕೊಂಡು ಸಂಸ್ಥೆ ಉತ್ತಮವಾಗಿ ಬೆಳೆಯುತ್ತಿದೆ. ಸಂಸ್ಥೆ ಕೇವಲ ಒಬ್ಬ ಸದಸ್ಯನಿಗೆ ಆರ್ಥಿಕವಾಗಿ ಸಹಾಯ ಮಾಡದೇ ಇಡೀ ಆ ಕುಟುಂಬಕ್ಕೆ ಆಶ್ರಯ ನೀಡಿದೆ. ಇದೇ ರೀತಿಯ ದೃಢ ಸಂಕಲ್ಪದೊಂದಿಗೆ ಮುಂದೆ ಸಾಗಿದರೆ, ಮುಂದೆ ಬಹುದೊಡ್ಡ ಸಂಸ್ಥೆಯಾಗಿ ಬೆಳೆದು ಇತರ ಸಂಸ್ಥೆಗಳಿಗೆ ಮಾದರಿಯಾಗಲಿದೆ ಎಂದು ಹೇಳಿದರು.

ಸಂಘದ ಅಧ್ಯಕ್ಷ ಡಾ. ನಾರಾಯಣ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ತಮ ಸಂಸ್ಥೆಯನ್ನು ಕಟ್ಟುವಾಗ ಅನೇಕ ಜನರ ಯೋಗದಾನವಿರುತ್ತದೆ. ಅದರಲ್ಲಿ ಸಂಸ್ಥೆಯ ಗ್ರಾಹಕರಿಂದ ಹಿಡಿದು ಸಂಸ್ಥೆಯಲ್ಲಿರುವ ಸಿಬ್ಬಂದಿ, ಆಡಳಿತ ಮಂಡಳಿಯವರ ಕಾರ್ಯತತ್ಪರತೆ, ಸದಸ್ಯರ ಸಕರಾತ್ಮಕ ಪಾಲ್ಗೊಳ್ಳುವಿಕೆಯು ಪ್ರಧಾನವಾಗಿದೆ. ಸಂಸ್ಥೆ ನಮ್ಮ ಆಸ್ತಿಯಲ್ಲ, ಅದು ಸಮಾಜದ ಆಸ್ತಿಯೆಂದು ತಿಳಿದಿರಬೇಕು. ವ್ಯಕ್ತಿ ಶಾಶ್ವತವಲ್ಲ, ಸಂಸ್ಥೆ ಶಾಶ್ವತ. ನಾವು ಕಟ್ಟುವ ಸಂಸ್ಥೆ ಸಾರ್ವಕಾಲಿಕವಾಗಿರುವಂತೆ ನಮ್ಮ ನಡೆನುಡಿ ಇರಬೇಕು ಎಂದರು.

ವಿವೇಕಾನಂದರ ತತ್ವಾದರ್ಶ ಪಾಲಿಸುವ ಉದ್ದೇಶದಿಂದ ಈ ಸಂಘವನ್ನು ಕಟ್ಟಿದ್ದೇವೆ. ಅದಕ್ಕೆ ತಕ್ಕಂತೆ ಸಂಸ್ಥೆ ಆರ್ಥಿಕವಾಗಿ, ಸಾಮಾಜಿಕವಾಗಿ ಸೇವೆ ಸಲ್ಲಿಸುತ್ತಿದೆ. ಸಂಘವು ಆರಂಭದಿಂದ ಇಲ್ಲಿಯವರೆಗೆ ಎ ಗ್ರೇಡ್ ಮಾನ್ಯತೆ ಪಡೆದಿದೆ. ಇದು ಸಂಸ್ಥೆಯ ಕಾರ್ಯವೈಖರಿಯನ್ನು ತೋರಿಸುತ್ತದೆ. 2024-25ರಲ್ಲಿ 21.10 ಕೋಟಿ ರೂ. ದುಡಿಯುವ ಬಂಡವಾಳ, 2.65 ಕೋಟಿ ರೂ. ನಿಧಿಗಳು, 2136 ಸದಸ್ಯರು, 73.6 ಲಕ್ಷ ಷೇರು ಬಂಡವಾಳ, 15.75 ಕೋಟಿ ರೂ. ಸಾಲ, 47.17 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ. 12ರಷ್ಟು ಲಾಭಾಂಶ ಕೊಡಲು ತೀರ್ಮಾನಿಸಿದ್ದೇವೆ ಎಂದರು.

ಸಮಕಾಲೀನ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ನಿಯಂತ್ರಣದಲ್ಲಿಡುವುದೇ ದೊಡ್ಡ ಸವಾಲಾಗಿದೆ. ಮನಸ್ಸು ಪರಿಶುದ್ಧವಾದಾಗ,  ಭಾವನೆಗಳು ಪರಿಶುದ್ಧವಾಗಿರುತ್ತವೆ. ಭಾವನೆಗಳು ಪರಿಶುದ್ಧವಾದಾಗ ವಿಚಾರಧಾರೆಗಳು ಪರಿಶುದ್ಧವಾಗಿರುತ್ತವೆ. ವಿಚಾರಧಾರೆಗಳು ಪರಿಶುದ್ಧವಾದಾಗ ನಮ್ಮಿಂದ ಸತ್ಕಾರ್ಯ ಮಾಡಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಜ್ಞಾನದ ಹಿಂದೆ ಹೋಗಬೇಕು. ಜ್ಞಾನದ ಹಸಿವು ವಿದ್ಯಾರ್ಥಿಗಳನ್ನು ಬದುಕಿನ ಔನ್ನತ್ಯಕ್ಕೆ ಒಯ್ಯುತ್ತದೆ ಎಂದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 624 ಅಂಕ ಪಡೆದ ಸಾವಿತ್ರಿ ರೋಣಿ, 623 ಅಂಕ ಪಡೆದ ಸಮೃದ್ಧಿ ಮೂಲ್ಯ ಹಾಗೂ ಕರಾಟೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಸೌಮ್ಯ ಶೆಟ್ಟಿ ಅವರನ್ನು ಸತ್ಕರಿಸಲಾಯಿತು. ಸಂಘದ ಸದಸ್ಯರ 34 ಪ್ರತಿಭಾವಂತ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಂಘದ ಉಪಾಧ್ಯಕ್ಷ ಆನಂದ ರಾವ್, ನಿರ್ದೇಶಕರಾದ ಅಂಜನಕುಮಾರ ಗಂಡಗುದರಿ, ಸತೀಶ ಮನ್ನಿಕೇರಿ, ಆನಂದ ಶೆಟ್ಟಿ, ಗಣೇಶ ಮರಕಲ, ದುರ್ಗಪ್ಪ ತಳವಾರ, ರೂಪಾ ಮಗದುಮ್ಮ, ಗಣೇಶ ನಾಯಕ, ಚಂದ್ರಕ್ರಾಂತ ಅಥಣಿಮಠ ಸೇರಿದಂತೆ ಸಂಘದ ಸಿಬ್ಬಂದಿ, ಪಿಗ್ಮಿ ಸಂಗ್ರಹಕಾರರು, ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನಿರ್ದೇಶಕರಾದ ಭಾರತಿ ಶೆಟ್ಟಿಗಾರ, ರಾಜೇಶ ಗೌಡ ಮಾತನಾಡಿದರು. ಸಂಘದ ಕಾರ್ಯದರ್ಶಿ ವಿಶಾಲ್ ಪಾಟೀಲ ವರದಿ ವಾಚಿಸಿದರು.  ಭೈರೋಬಾ ಕಾಂಬಳೆ ಸ್ವಾಗತಿಸಿದರು. ಭಾವನಾ ಬುದಲಿ ಪ್ರಾರ್ಥಿಸಿದರು. ಸಮ್ಮೇದ ಗಾಡೇಕರ ವಂದಿಸಿದರು.

WhatsApp Group Join Now
Telegram Group Join Now
Share This Article