ಕಾಗವಾಡ: ಸರ್ಕಾರದ ಆದೇಶಾನುಸಾರ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮನ್ನು ಅ. 20 ರಿಂದ 25 ರೊಳಗೆ ಪ್ರಾರಂಭಿಸಿ, 12 ಲಕ್ಷ ಮೆಟ್ರಿಕ್ ಟನ್ ನುರಿಸುವ ಗುರಿ ಹೊಂದಲಾಗಿದ್ದು, ರೈತರು ತಾವು ಬೆಳೆದ ಕಬ್ಬನ್ನು ಕಾರ್ಖಾನೆಗೆ ಪೂರೈಕೆ ಮಾಡಿ ಸಹಕರಿಸಬೇಕು. ಮತ್ತು ಈ ವರ್ಷ ಕಬ್ಬಿಗೆ ಯೋಗ್ಯ ಬೆಲ ಕೂಡಾ ನೀಡಲಾಗುವುದು ಎಂದು ಶಿರಗುಪ್ಪಿ ಶುರ‍್ಸ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಡಾ. ರಮೇಶ ದೊಡ್ಡಣ್ಣವರ ತಿಳಿಸಿದ್ದಾರೆ.
ಅವರು, ರವಿವಾರ ದಿ. 19 ರಂದು ಕಾರ್ಖಾನೆಯ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ನಮ್ಮ ಕಾರ್ಖಾನೆಯು ಕಳೆದ ಅನೇಕ ವರ್ಷಗಳಿಂದ ರೈತರಿಗೆ ಉತ್ತಮ ಬೆಲೆ ನೀಡುವ ಜೊತೆಗೆ ಕಬ್ಬು ಪೂರೈಸಿದ 15 ದಿನಗಳ ಒಳಗಾಗಿ ಬಿಲ್ ಪಾವತಿ ಮಾಡುವ ಮೂಲಕ ರೈತರ ವಿಸ್ವಾಸಕ್ಕೆ ಪಾತ್ರರಾಗಿದ್ದೇವೆ. ಆದರೇ ಕಳೆದ ಕೆಲ ದಿನಗಳಿಂದ ಕಾರ್ಖಾನೆಯನ್ನು ಮಾರಾಟ ಮಾಡಲಾಗುವುದು ಎಂಬ ಸುಳ್ಳು ವದಂತಿ ಹಬ್ಬಿಸಿ, ಕಾರ್ಖಾನೆಗೆ ಕಳಂಕ ತರುವ ಕೆಲಸವನ್ನು ಕೆಲವರು ಮಾಡುತ್ತಿದ್ದು, ರೈತರು ವದಂತಿಗಳಿಗೆ ಕಿವಿ ಕೊಡದೇ ಕಬ್ಬು ಪೂರೈಕೆ ಮಾಡಬೇಕೆಂದು ಮನವಿ ಮಾಡಿಕೊಂಡರು.
ಕಾರ್ಖಾನೆಯ ಮುಖ್ಯ ವ್ಯವಸ್ಥಾಪಕ ಅರುಣ ಫರಾಂಡೆ ಮಾತನಾಡಿ, ಕೇಂದ್ರ ಸರ್ಕಾರ ಸಕ್ಕರೆಯ ಬೆಲೆಯನ್ನು 42 ರೂ. ಪ್ರತಿ ಕೀಲೋ, ಇಥೆನಾಲ್ ಬೆಲೆಯನ್ನು 70 ರೂ. ಪ್ರತಿ ಲೀಟರ್ ಮತ್ತು ವಿದ್ಯುತ್ ಬೆಲೆಯನ್ನು 6 ರಿಂದ 8 ರೂ. ಪ್ರತಿ ಯುನಿಟ್‌ನಂತೆ ನಿಗಧಿ ಮಾಡಿದಲ್ಲಿ ಕಾರ್ಖಾನೆಗಳು ಆರ್ಥಿಕ ಸಂಕಷ್ಟದಿAದ ಮುಕ್ತವಾಗಿ ರೈತರ ಕಬ್ಬಿಗೆ ಯೋಗ್ಯ ಬೆಲೆ ನೀಡಲು ಸಾಧ್ಯವಾಗಲಿದೆ ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.
ಕಾರ್ಖಾನೆಯ ಅಧ್ಯಕ್ಷ ಕಲ್ಲಪ್ಪಣ್ಣಾ ಮಗ್ಗೆಣ್ಣವರ ಮಾತನಾಡಿ, ರೈತರು ಕಾರ್ಖಾನೆಗಳ ವಿರುದ್ಧ ಹೋರಾಟ ಮಾಡುವ ಬದಲಾಗಿ, ಸರ್ಕಾರ ಧೋರಣೆಯ ವಿರುದ್ಧ ಹೋರಾಟ ಮಾಡಿ, ರೈತರ ಕಬ್ಬಿಗೆ ಯೋಗ್ಯ ಬೆಲೆ ದೊರೆಯುವುದಲ್ಲದೇ ಕಾರ್ಖಾನೆಗಳು ಆರ್ಥಿಕ ಸಂಕಷ್ಟದಿAದ ಮುಕ್ತಗೊಳ್ಳಲಿವೆ ಎಂದರು.
ಈ ಸಮಯದಲ್ಲಿ ಪ್ರಥ್ವಿ ದೊಡ್ಡಣ್ಣವರ, ಕಾರ್ಖಾನೆಯ ಮಾನವ ಸಂಪನ್ಮೂಲ ಅಧಿಕಾರಿ ರವೀಂದ್ರ ಜಾಡರ ಮತ್ತು ಕೃಷಿ ಅಧಿಕಾರಿ ಮಹಾವೀರ ಬಿರನಾಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.