ಬಯಲಾಟ ಕಲೆಗಳ ಕೃತಿ ರಚನೆ ಸಂಶೋಧನಾತ್ಮಕವಾದದ್ದು : ಡಾ.ರಾಜು ಕಂಬಾರ

Hasiru Kranti
ಬಯಲಾಟ ಕಲೆಗಳ ಕೃತಿ ರಚನೆ ಸಂಶೋಧನಾತ್ಮಕವಾದದ್ದು : ಡಾ.ರಾಜು ಕಂಬಾರ
WhatsApp Group Join Now
Telegram Group Join Now

ಮೂಡಲಗಿ : ಕರ್ನಾಟಕ ಬಯಲಾಟ ಕಲಾ ಪ್ರಕಾರಗಳ ಜಿಲ್ಲಾ ಪುಸ್ತಕಗಳನ್ನು ಸಂಶೋಧನಾತ್ಮಕ ನೆಲೆಯಲ್ಲಿ ರಚನೆಗೊಳಿಸುತ್ತಿರುವ ಬಯಲಾಟ ಅಕಾಡೆಮಿಯ ಯೋಜನೆಯ ಕಾರ್ಯ ದಾಖಲಾರ್ಹವಾಗಿದೆ ಎಂದು ಬೆಳಗಾವಿ ಜಿಲ್ಲಾ ಬಯಲಾಟ ಕಲಾ ಪ್ರಕಾರ ಪುಸ್ತಕ ರಚನೆ ಯೋಜನೆ ಲೇಖಕ ಹಾಗೂ ಮೂಡಲಗಿ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ರಾಜು ಕಂಬಾರ ಹೇಳಿದರು.

ಕರ್ನಾಟಕ ಬಯಲಾಟ ಅಕಾಡೆಮಿ, ಬಾಗಲಕೋಟೆ ಇವರ ಆಶ್ರಯದಲ್ಲಿ ಭಾನುವಾರ ಬಾಗಲಕೋಟೆ ನಗರದ ಅಕಾಡೆಮಿಯ ಸಭಾಭವನದಲ್ಲಿ ಜರುಗಿದ ಸಂಶೋಧನಾ ಸಹಾಯಕರು ಮತ್ತು ಜಿಲ್ಲಾ ಬಯಲಾಟ ಕಲಾಪ್ರಕಾರಗಳ ಪುಸ್ತಕ ಪರಿಚಯ ಯೋಜನೆಯ ಲೇಖಕರ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕದ ಎಲ್ಲಾ ಅಕಾಡೆಮಿಗಳಿಗಿಂತ ಬಯಲಾಟ ಅಕಾಡೆಮಿ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ಬಯಲಾಟ ಕಲೆ ಮತ್ತು ಕಲಾವಿದರ ಕೃತಿ ರಚನೆಯ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಜಿಲ್ಲೆಯ ಬಯಲಾಟ ಕಲಾವಿದರ ಮತ್ತು ಕಲೆಗಳ ಹಾಗೂ ಅವರ ಬಳಿ ಇರುವ ಬಯಲಾಟಗಳ ಹಸ್ತ ಪ್ರತಿಗಳ ಕುರಿತು ಸಂಶೋಧನಾತ್ಮಕ ನೆಲೆಯಲ್ಲಿ ಪುಸ್ತಕಗಳು ರಚನೆಯಾಗಲಿವೆ. ಬಯಲಾಟ ಅಕಾಡೆಮಿಯ ಪ್ರತಿಷ್ಠಿತ ಯೋಜನೆಗೆ ಪ್ರತಿ ಜಿಲ್ಲೆಯ ಬಯಲಾಟ ಕಲಾವಿದರ ಸಹಕಾರ ಅಗತ್ಯವಾಗಿದ್ದು, ಮೊದಲ ಹಂತದಲ್ಲಿ ಈ ನಿರ್ದಿಷ್ಟ ಯೋಜನೆಯ ಪುಸ್ತಕಗಳು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಲಿವೆ. ಬಯಲಾಟ ಕಲಾವಿದರು ತಮ್ಮ ಬಳಿ ಇರುವ ಬಯಲಾಟ ಕಲೆಗಳ ಹಸ್ತಪ್ರತಿಗಳನ್ನು ಈ ಯೋಜನೆಯ ಲೇಖಕರಿಗೆ ನೀಡುವುದರ ಮೂಲಕ ಜಿಲ್ಲೆಯ ಬಯಲಾಟ ಕಲೆಗಳ ಮತ್ತು ಕಲಾವಿದರ ಪುಸ್ತಕ ರಚನೆಗೆ ಸಹಕರಿಸಬೇಕೆಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಬಯಲಾಟ ಅಕಾಡೆಮಿಯ ಅಧ್ಯಕ್ಷರಾದ ಡಾ. ಕೆ ಆರ್ ದುರ್ಗಾದಾಸ ಅವರು ಮಾತನಾಡಿ, ಬಯಲಾಟ ಅಕಾಡೆಮಿಯು ಕೇವಲ ಜನಪ್ರಿಯ ಕಾರ್ಯಕ್ರಮಗಳನ್ನು ಹಾಕಿಕೊಳ್ಳದೆ, ಬಯಲಾಟ ಕಲೆ ಮತ್ತು ಕಲಾವಿದರ ಕುರಿತಾಗಿ ಸಂಶೋಧನಾತ್ಮಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಯೋಜನೆಗಳು ಮುಂದಿನ ಯುವ ಸಮುದಾಯಕ್ಕೆ ಬಯಲಾಟಗಳ ಕುರಿತಾಗಿ ಅಪೂರ್ವ ದಾಖಲಾತಿಗಳನ್ನು ಒದಗಿಸಿಕೊಡುತ್ತವೆ. ನಿಗದಿತ ಸಮಯದಲ್ಲಿ ಜಿಲ್ಲಾ ಬಯಲಾಟ ಕಲಾಪ್ರಕಾರಗಳ ಪುಸ್ತಕಗಳ ರಚನೆಗೆ ಲೇಖಕರು ಶ್ರದ್ಧೆಯಿಂದ ಕಾರ್ಯನಿರ್ವಹಿಸಬೇಕು. ಬಯಲಾಟ ಕಲೆ ಮತ್ತು ಕಲಾವಿದರ ಕಾರ್ಯವನ್ನು ಲೇಖಕರು ಕರುಳಿಗೆ ಹಚ್ಚಿಕೊಂಡು ಕೆಲಸ ಮಾಡಬೇಕೆಂದರು.
ಈ ಸಂದರ್ಭದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದ ವಿಶ್ರಾಂತ ಅಧ್ಯಾಪಕ ಡಾ. ಕೆ ರವೀಂದ್ರನಾಥ ಶಿಬಿರದ ಕುರಿತು ಆಶಯ ಭಾಷಣ ಮಾಡಿದರು. ಸಿಂಧನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಜಾಜಿ ದೇವೇಂದ್ರಪ್ಪ ಅವರು ಬೈಲಾಟಗಳು ಸಂಸ್ಕೃತಿಯ ಅವಿಭಾಜ್ಯ ಅಂಗಗಳು, ಕರ್ನಾಟಕ ಬಯಲಾಟ ಅಕಾಡೆಮಿಯ ಸಹಸದಸ್ಯ ಡಾ. ಅರುಣ ಜೋಳದ ಕೂಡ್ಲಿಗಿ ಅವರು, ಬಯಲಾಟ ಕಲಾವಿದರ ಮಾಹಿತಿ ಸಂಗ್ರಹ ಮತ್ತು ಹಸ್ತಪ್ರತಿ ಸಂಗ್ರಹದ ಮಹತ್ವ ಹಾಗೂ ಅಕಾಡೆಮಿಯ ಸಹ ಸದಸ್ಯೆ ಡಾ. ಚೇತನ ಎಚ್. ಆರ್. ಅವರು, ಕ್ಷೇತ್ರ ಕಾರ್ಯದ ಮಹತ್ವ ಕುರಿತು ಮಾತನಾಡಿದರು. ಅಕಾಡೆಮಿಯ ರಿಜಿಸ್ಟ್ರಾರ್ ಕಸ್ತೂರಿ ಪಾಟೀಲ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಸಂಶೋಧನಾತ್ಮಕ ಸಹಾಯಕರು ಮತ್ತು ಲೇಖಕರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article