*ಕನ್ನಡ ಮಹಿಳಾ ಸಾಹಿತ್ಯದ ಆರಂಭದ ಕುರುಹುಗಳು ವಚನ ಸಾಹಿತ್ಯದಲ್ಲಿವೆ-ಡಾ.ಕೆ.ಎಸ್.ಶಿವಪ್ರಕಾಶ್*

A B
By A B
*ಕನ್ನಡ ಮಹಿಳಾ ಸಾಹಿತ್ಯದ ಆರಂಭದ ಕುರುಹುಗಳು ವಚನ ಸಾಹಿತ್ಯದಲ್ಲಿವೆ-ಡಾ.ಕೆ.ಎಸ್.ಶಿವಪ್ರಕಾಶ್*
WhatsApp Group Join Now
Telegram Group Join Now
ಬಳ್ಳಾರಿ.ಮಾ.09:
12ನೇ ಶತಮಾನದ ವಚನ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಅಪಾರವಾಗಿದೆ. ಅಕ್ಕಮಹಾದೇವಿ, ಸತ್ಯಕ್ಕ,ಅಮುಗೆ ರಾಯಮ್ಮ, ಆಯ್ದಕ್ಕಿ ಲಕ್ಕಮ್ಮ,ನೀಲಾಂಬಿಕೆ,ಗಂಗಾಂಬಿಕೆ ಸೇರಿದಂತೆ 35ಕ್ಕೂ ಹೆಚ್ಚು ಶರಣೆಯರು ಲಿಂಗ ತಾರತಮ್ಯ, ಸಾಮಾಜಿಕ ಅಸಮಾನತೆ ಮತ್ತು ಧಾರ್ಮಿಕ ಮೂಢನಂಬಿಕೆಗಳ ವಿರುದ್ಧ ಬಂಡಾಯದ ದನಿಯಾಗಿ, ವಚನಗಳ ಮೂಲಕ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಜಾಗೃತಿ ಮೂಡಿಸಿದರು. ಬಸವಾದಿ ಶರಣರ ಆಶಯದಂತೆ ಇವರು ಅನುಭವ ಮಂಟಪದಲ್ಲಿ ಪಾಲ್ಗೊಂಡು ಕಾಯಕ ಮತ್ತು ದಾಸೋಹ
ತತ್ವಗಳನ್ನು ಎತ್ತಿ ಹಿಡಿದರೆಂದು ಶ್ರೀ ಕೃಷ್ಣ ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕ‌ ಡಾ.ಕೆ.ಎಸ್.ಶಿವಪ್ರಕಾಶ್ ಅಭಿಪ್ರಾಯಪಟ್ಟರು.
ಅವರು ನಗರದ ಭವಾನಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಮಹಿಳಾ ದಿನಾಚರಣೆ ಮತ್ತು ಶ್ರೀಮತಿ ತುಳಜಮ್ಮ ಲಕ್ಷ್ಮಪ್ಪ ಜಾಧವ್ ದತ್ತಿ ಹಾಗೂ ಮಿಂಚೇರಿ ಗೌಡ್ರ ಅಂಬಮ್ಮ ಶಿವಾರೆಡ್ಡಿ ದತ್ತಿ ಕಾರ್ಯಕ್ರಮದಲ್ಲಿ ‘ವಚನ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ‘ ವಿಷಯ ಕುರಿತಂತೆ ಮಾತನಾಡಿದರು.
ಸಮಕಾಲೀನ ಕನ್ನಡ ಸಾಹಿತ್ಯ
ಅವಲೋಕಿಸಿದರೆ ಮಹಿಳಾ ಲೇಖಕಿಯರ ಕೊಡುಗೆ ಅನನ್ಯವಾಗಿದೆ. ಕನ್ನಡ ಮಹಿಳಾ ಸಾಹಿತ್ಯದ ಆರಂಭದ ಕುರುಹುಗಳನ್ನು 12 ನೇ ಶತಮಾನದ ವಚನ ಸಾಹಿತ್ಯದಲ್ಲಿ ಕಾಣಬಹುದಾಗಿದೆ.  ಕೆಳವರ್ಗದ ಮಹಿಳೆಯರೂ
ವಚನ ರಚನೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿದೆ.
 ಅನುಭವ ಮಂಟಪವು ಮಹಿಳೆಯರಿಗೆ ಸಾಹಿತ್ಯ ಸೃಷ್ಟಿ, ಧಾರ್ಮಿಕ ಚರ್ಚೆ ಮತ್ತು ಸಾಮಾಜಿಕ ವಿಚಾರಗಳನ್ನು ಹಂಚಿಕೊಳ್ಳುವ ಮುಕ್ತ ವೇದಿಕೆ
ಕಲ್ಪಿಸಿಕೊಟ್ಟಿತು.
ಈ ಶರಣೆಯರು ಕೇವಲ ಸಾಹಿತ್ಯದ ದೃಷ್ಟಿಯಿಂದಷ್ಟೇ ಅಲ್ಲದೆ, ಸಾಮಾಜಿಕ ಕ್ರಾಂತಿಯ ದೃಷ್ಟಿಯಿಂದಲೂ ವಚನ ಸಾಹಿತ್ಯಕ್ಕೆ ಭದ್ರ ಬುನಾದಿಯನ್ನು ಹಾಕಿದರು.
ತಮ್ಮ ವಚನಗಳ ಮೂಲಕ ಸ್ತ್ರೀ ಪುರುಷ ಸಮಾನತೆಯನು‌ ಹೇಳಿದರಲ್ಲದೆ ಕಾಯಕ ನಿಷ್ಠೆ, ವೈಚಾರಿಕತೆಯ ಮಹತ್ವವನ್ನು ಸಾರಿದರು. ಅಂದಿನ ಸಮಕಾಲೀನ ಸಮಾಜ ವ್ಯವಸ್ಥೆಯ  ಸ್ಥಿತಿಗತಿಗಳ ಬಗ್ಗೆ ಟೀಕಿಸಿ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು.
 ಅಮುಗೆ ರಾಯಮ್ಮ,  ಆಯ್ದಕ್ಕಿ ಲಕ್ಕಮ್ಮರಂತಹ ಮಹಿಳೆಯರು ಕಾಯಕ ನಿಷ್ಠೆಗೆ ಹೆಸರಾದವರು. ಪತಿ ಆಯ್ದಕ್ಕಿ ಮಾರಯ್ಯನವರ ಕಾಯಕದ ಕುರಿತು ಲಕ್ಕಮ್ಮ ತೀಕ್ಷ್ಣವಾಗಿ ಪ್ರಶ್ನಿಸುತ್ತಿದ್ದ ಅತ್ಯಂತ ಪ್ರಭುದ್ಧ ಮಹಿಳೆಯಾಗಿದ್ದಾಳೆ.
ಈ ವಚನಕಾರ್ತಿಯರು ಆಧ್ಯಾತ್ಮ,ಸಾಮಾಜಿಕ, ವೈಚಾರಿಕ ಚಿಂತನೆಗಳನ್ನು ತಮ್ಮ ವಚನಗಳ ಮೂಲಕ ವ್ಯಕ್ತಪಡಿಸಿದರೆಂದು ಅವರು ಹೇಳಿದರು.
 ಜನಪದ ಸಂಶೋಧಕಿ ಡಾ.ಎ.ಎನ್.ಸಿದ್ದೇಶ್ವರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 12 ನೇ ಶತಮಾನದಲ್ಲಿ ಶರಣರು ಮಹಿಳೆಯರಿಗೆ  ಸಮಾನತೆ ನೀಡಿ ಶಕ್ತಿ ತಂದುಕೊಟ್ಟರು.ಸ್ತ್ರೀಯರ ದೈಹಿಕ ಅಸಮಾನತೆಯನ್ನು ಗೌಣವಾಗಿಸಿ ವ್ಯಕ್ತಿತ್ವಕ್ಕೆ ಮನ್ನಣೆ ನೀಡಿ ಮುನ್ನೆಲೆಗೆ ತಂದರು.ಮಹಿಳೆಯರ ಬೌದ್ಧಿಕ ವಿಕಾಸದ ಹಾದಿ ಅನುಭವ ಮಂಟಪದಲ್ಲಿಯೇ ರೂಪುಗೊಂಡಿತು.ಅಂದಿನ ಶರಣ ಚಳವಳಿಯು ಸಾಮಾಜಿಕವಾಗಿ ಮಹಿಳೆಯರು ಬದಲಾವಣೆಗೊಳ್ಳಲು ಕಾರಣವಾಯಿತೆಂದು ಅವರು ಹೇಳಿದರು.
ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಅವಕಾಶ ವಂಚಿತರಾದ ತಳಸಮುದಾಯದ ಸ್ತ್ರೀಯರು ಕೂಡ ವಚನ ಸಾಹಿತ್ಯ ಸೃಷ್ಠಿ ಮಾಡಿದರು.  ಹೆಣ್ಣು ತನ್ನ ಒಳಸಂಕಟಗಳನ್ನು ನಿರ್ಭಿಡೆಯಿಂದ ಹೇಳಿಕೊಳ್ಳಲು ಮುಂದಾದರು.ಅವಳ   ನೋವುಗಳು ವಚನ ಸಾಹಿತ್ಯದಲ್ಲಿ ಅಡಗಿವೆ ಎಂದರಲ್ಲದೆ ಶರಣ ಸಿದ್ದರಾಮೇಶ್ವರರು ಹೆಣ್ಣು ಮಾಯೆಯಲ್ಲ,ಸಾಕ್ಷಾತ್ ಕಪಿಲ ಸಿದ್ದಮಲ್ಲಿಕಾರ್ಜುನ ಎಂದು ಹೇಳಿದರು ಎಂದರು.
ಶ್ರೀ ಭವಾನಿ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ಆರ್.ಎಲ್.ಜಾಧವ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ  ಸಮಾಜ  ಸೇವಕ ಭೀಮನೇನಿ ಪ್ರಸಾದ್ ,ದೂರದರ್ಶನ ವರದಿಗಾರ ಎಸ್.ಕಿನ್ನೂರೇಶ್ವರ ಉಪಸ್ಥಿತರಿದ್ದರು.
ಜಿಲ್ಲಾಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದರಾಮ‌ ಕಲ್ಮಠ ,ನಿಕಟಪೂರ್ವ ಅಧ್ಯಕ್ಷ ಕೆ.ಬಿ.ಸಿದ್ದಲಿಂಗಪ್ಪ, ಎ.ಎಂ.ಪಿ.ವೀರೇಶ ಸ್ವಾಮಿ,ಚಾಂದ್ ಭಾಷ ,ಯು.ಶ್ರೀನಿವಾಸಮೂರ್ತಿ, ಕೆ.ಹೊನ್ನೂರ್ ಸಾಬ್,ಗೋವಿಂದಪ್ಪ ಮುಂತಾದವರು ಉಪಸ್ಥಿತರಿದ್ದರು.
ಗಾಯಕ ಡಿ.ಎಸ್.ಗಣೇಶ್ ಗೀತಗಾಯನ ನಡೆಸಿಕೊಟ್ಟರು.
WhatsApp Group Join Now
Telegram Group Join Now
Share This Article