ಅಥಣಿ : ಸ್ವಿಸ್ ಬ್ಯಾಂಕ್ ನಿಂದ ಕಪ್ಪು ಹಣ ತಂದು ಯಾರ ಖಾತೆಗೂ ಜಮಾ ಮಾಡಲ್ಲಿಲ್ಲ, ಕೋಟಿ ಉದ್ಯೋಗ ಸೃಷ್ಟಿ ಎಂದು ಹೇಳಿ ಲಕ್ಷ ಉದ್ಯೋಗವೂ ಇಲ್ಲ, ಪೆಟ್ರೋಲ್ ಡೀಸೆಲ್ ಬೆಲೆ ಇಳಿಸ್ತೀನಿ ಎಂದು ಗಗನಕ್ಕೆ ಏರಿಸಿದ, ಬ್ರಷ್ಟಾಚಾರ ನಿರ್ಮೂಲನೆ ಮಾಡ್ತೀನಿ ಎಂದು ಕೋಟಿ ಕೋಟಿ ಚುನಾವಣಾ ಬಾಂಡಗಳ ದೇಣಿಗೆ ಸಂಗ್ರಹಿಸಿದ ಹೀಗೆ ಸಾಲು ಸಾಲು ಹಸಿ ಹಸಿ ಸುಳ್ಳುಗಳನ್ನು ಹೇಳಿದ ದೇಶದ ಮೊದಲ ಪ್ರಸಿದ್ಧ ಪ್ರಧಾನಿ ಎಂದರೆ ಮೋದಿ ಅವರು ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಮತ್ತು ಹಿರಿಯ ನ್ಯಾಯವಾದಿ ಡಾ. ಸಿ ಎಸ್ ದ್ವಾರಕಾನಾಥ್ ಹೇಳಿದರು.
ಅವರು ತಾಲೂಕಿನ ಬಡಚಿ ಗ್ರಾಮದ ಚೆನ್ನದಾಸರು , ಸಿಂಧೊಳ್ಳು ಮತ್ತು ಇತರೆ ಅಲೆಮಾರಿಗಳ ಕಾಲೋನಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು. ದಿನಕ್ಕೆ ನಾಲ್ಕು ಬಾರಿ ದುಬಾರಿ ಬಟ್ಟೆ ಬದಲಿಸುವ ಶೋಕಿ ಇರುವ ಪ್ರಧಾನಿ ಮೋದಿ, ನೋಡಿದವರಿಗೆ ನಗೆಪಾಟಲಿಗೆ ಈಡಾಗುವಂತೆ ಕಸವೇ ಇಲ್ಲದಲ್ಲಿ ಪೊರಕೆಯಿಡಿದು ಗುಡಿಸುವ, ನೀರಲ್ಲಿ ಮುಳುಗಿ ಭಕ್ತಿ ಪ್ರದರ್ಶಿಸುವ, ವಿಚಿತ್ರ ಮಾಲೆಗಳನ್ನು ಧರಿಸಿ ಮಂತ್ರವಾದಿಯಂತಾಡುವ, ಗವಿಯೊಳಗೆ ಹೋಗಿ ಧ್ಯಾನಿಯಂತೆ ಕೂಡ್ರುವ ಇಂತವರು ದೇಶದ ಪ್ರಧಾನಿ ಹುದ್ದೆಗೆ ಕಳಂಕ. ಇಂತಹ ಸುಳ್ಳಿನ, ಮೋಜಿನ ವ್ಯಕ್ತಿಯನ್ನು ಅಧಿಕಾರದಿಂದ ಕೆಳಗಿಳಿಸಲು ಜನಪರ ಆಡಳಿತ ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಗೆಲ್ಲಿಸಬೇಕು ಎಂದು ಹೇಳಿದರು.
ಬಂಡಾಯ ಸಾಹಿತಿ ಡಾ. ಯಲ್ಲಪ್ಪ ಹಿಮ್ಮಡಿ ಮಾತನಾಡಿ ಸಂವಿಧಾನದ ಘನತೆಯನ್ನು ಕಾಪಾಡಿದ ಮತ್ತು ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶದ ಆರ್ಥಿಕ ಗುಣಮಟ್ಟ ಅಭಿವೃದ್ಧಿ ಪಡಿಸಿದ ಕಾಂಗ್ರೆಸ್ ಪಕ್ಷ ನಿಜಕ್ಕೂ ದುಡಿಯುವ ವರ್ಗದ ಪರವಾಗಿದೆ. ಆದಾನಿ ಅಂಬಾನಿ ಮಾತ್ರವೇ ದೇಶವೆಂದೂ ಧರ್ಮ ದೇವರ ಕುರಿತ ಭಾವುಕತೆಯೇ ದೇಶದ ಅಭಿವೃದ್ಧಿ ಎಂದು ನಂಬಿಸಿರುವ ಪ್ರಗತಿ ವಿರೋಧಿ ಬಿಜೆಪಿಯನ್ನು ಈಗಿನ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿ ಎಲ್ಲರೂ ಒಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಗ್ಯಾರಂಟಿ ಪತ್ರಗಳನ್ನು ಹಂಚಲಾಯಿತು.
ಕರ್ನಾಟಕ ಅಲೆಮಾರಿ ಬುಡಕಟ್ಟು ಮಹಾಸಭಾ ರಾಜ್ಯ ಕಾರ್ಯದರ್ಶಿ ನಾಗರಾಜ್, ಬೆಂಗಳೂರಿನ ರಿಹಾನಾ ನದಾಫ್, ಅಲೆಮಾರಿ ಕೋಶದ ಜಿಲ್ಲಾ ಅನುಷ್ಠಾನ ಸಮಿತಿಯ ಸದಸ್ಯರಾದ ಉದಯ ಗಾಣಿಗೇರ ಮತ್ತು ಮಹೇಂದ್ರ ಗಾಣಿಗೇರ, ಹನಮಂತ ತಾಯಪ್ಪ ಸಣ್ಣಕ್ಕಿನವರ, ಪ್ರೊ. ಸದಾಶಿವ ಗಾಣಿಗೇರ, ಸ್ಥಳೀಯ ಪ್ರಮುಖರಾದ ಶ್ರೀಮತಿ ರೇಷ್ಮಾ ನಂದಿವಾಲೆ, ಸುಶೀಲಾ ದಾದು ನಂದಿವಾಲೆ, ಸುರೇಖಾ ಮುತ್ತಪ್ಪ ನಂದಿವಾಲೆ, ಬಾಬು ನಂದಿವಾಲೆ ಮತ್ತು ಅಲೆಮಾರಿ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.