ರಾಮದುರ್ಗ: ಮಾದಕ ವಸ್ತುಗಳ ಸೇವನೆಯಿಂದ ಯುವ ಪೀಳಿಗೆ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿರುವುದು ಆತಂಕದ ಸಂಗತಿಯಾಗಿದೆ. ಪಾಲಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚು ಗಮನ ಹರಿಸುವುದು ಅನಿವಾರ್ಯವಾಗಿದೆ ಎಂದು ಡಾ. ಚನ್ನಬಸು ಕುಲಗೋಡ ಹೇಳಿದರು.
ಸ್ಥಳೀಯ ನಾಗಮ್ಮ ಬಿ.ಕುಲಗೋಡ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಧರ್ಮಸ್ಥಳ ಸಂಸ್ಥೆಯು ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ನಿಮಿತ್ಯ ಹಮ್ಮಿಕೊಂಡ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಥೆಯ ಜಿಲ್ಲಾ ನಿರ್ದೇಶಕ ಲವಕುಮಾರ ಮಾತನಾಡಿ, ಧರ್ಮಸ್ಥಳ ಸಂಸ್ಥೆಯು ಹುಟ್ಟುವ ಮಕ್ಕಳಿಂದ ಹಿಡಿದು ವಯೋವೃದ್ಧರ ವರೆಗೆ ಹಾಗೂ ಸಮಾಜದ ಎಲ್ಲ ಸ್ತರದ ಜನಾಂಗದ ಅಭಿವೃಧ್ಧಿಗೆ ಒಂದಿಲ್ಲೊಂದು ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಬಡವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.
ಮಾದಕ ವಸ್ತುಗಳ ಸೇವನೆಯಿಂದಾಗುವ ದುಸ್ಪರಿಣಾಮಗಳು ಕುರಿತು ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕ ಮಲ್ಲಿಕಾರ್ಜುನರಡ್ಡಿ ಗೊಂದಿ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರು.
ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಕೃಷ್ಣಾಜಿರಾವ್ ಕುಲಕರ್ಣಿ ಮಾತನಾಡಿ, ಧರ್ಮಸ್ಥಳ ಸಂಸ್ಥೆಯು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ದುಶ್ಚಟಗಳಿಂದ ದೂರ ಉಳಿಯುವಂತೆ ಯುವಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ರಮೇಶ ಜಲಗೇರಿ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ಅಶೋಕ ಕುಲಗೋಡ ಉಪಸ್ಥಿತರಿದ್ದರು. ತಾಲೂಕು ಯೋಜನಾಧಿಕಾರಿ ಸಚೀನ ಸ್ವಾಗತಿಸಿದರು. ಮೇಲ್ವಿಚಾರಕ ಬಸಪ್ಪ ನಿರೂಪಿಸಿ, ವಂದಿಸಿದರು.