ಮುಂದೊಮ್ಮೆ  ವಿಶ್ವ ಸಂಸ್ಥೆಯಿಂದಲೂ ಬಸವಣ್ಣನವರಿಗೆ ಮನ್ನಣೆ: ಡಾ.ಅವಿನಾಶ್ ಕವಿ

Ravi Talawar
ಮುಂದೊಮ್ಮೆ  ವಿಶ್ವ ಸಂಸ್ಥೆಯಿಂದಲೂ ಬಸವಣ್ಣನವರಿಗೆ ಮನ್ನಣೆ: ಡಾ.ಅವಿನಾಶ್ ಕವಿ
oplus_0
WhatsApp Group Join Now
Telegram Group Join Now
ಬೆಳಗಾವಿ; ಅದ್ದ್ವಿತೀಯವಾದ ನಾಯಕತ್ವದ ಗುಣಗಳನ್ನು ಹೊಂದಿರುವ ಬಸವಣ್ಣನವರಿಗೆ ಮುಂದೊಮ್ಮೆ ವಿಶ್ವಸಂಸ್ಥೆ ಕೂಡ ಮನ್ನಣೆ ನೀಡುತ್ತದೆ ಎಂದು ಡಾ.ಅವಿನಾಶ್ ಕವಿ ಹೇಳಿದರು.
ಅವರು ಬೆಳಗಾವಿಯಲ್ಲಿ ದಾನಮ್ಮದೇವಿ ಮರಿಪುರಾಣ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. 1948ರಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ವಿಭಾಗವು ಒಬ್ಬ ನಾಯಕನಲ್ಲಿ ಇರಬೇಕಾದ ಗುಣಗಳ ಬಗ್ಗೆ 30 ಅಂಶ ಕಾರ್ಯಕ್ರಮಗಳ ಘೋಷಣೆ ಮಾಡಿತು. ಅದರಲ್ಲಿರುವ ಎಲ್ಲಾ ಅಂಶಗಳು ಬಸವಣ್ಣನವರಲ್ಲಿವೆ, ಅದೇ ರೀತಿ ಜಾಗತಿಕ ಮಟ್ಟದ ವಿಶ್ವವಿದ್ಯಾಲಯಗಳು ಕೂಡ ನಾಯಕತ್ವದ ಗುಣಗಳ ಪಟ್ಟಿಯನ್ನು ತಯಾರಿಸಿದವು ಆ ಎಲ್ಲ ಗುಣಗಳು ಕೂಡ ಬಸವಣ್ಣನವರಲ್ಲಿವೆ, ಹೀಗಾಗಿ ಬಸವಣ್ಣನವರು ಕೇವಲ ಕರ್ನಾಟಕದ ಸಾಂಸ್ಕೃತಿಕ  ನಾಯಕರಲ್ಲ ಅವರು ಇಡೀ ಭಾರತ ದೇಶದ ಸಾಂಸ್ಕೃತಿಕ ನಾಯಕ ಅಷ್ಟೇ ಅಲ್ಲ ಅವರು ಸಮಸ್ತ ಮಾನವ ಕುಲ ಕೋಟಿಗೆ ಸಾಂಸ್ಕೃತಿಕ ನಾಯಕನಾಗುವ ಅರ್ಹತೆಗಳನ್ನು ಹೊಂದಿದ್ದಾರೆ ಹೀಗಾಗಿ ಮುಂದೊಂದು ದಿನ ಅವರನ್ನು ಇಡೀ ಭಾರತ ದೇಶವು ಗುರುತಿಸುತ್ತದೆ ಅಷ್ಟೇ ಅಲ್ಲ ಇಡೀ ವಿಶ್ವವೇ ಗುರುತಿಸುತ್ತದೆ. ವಿಶ್ವಸಂಸ್ಥೆಯಿಂದಲೂ ಬಸವಣ್ಣನವರಿಗೆ ಮನ್ನಣೆ ಸಿಗುತ್ತದೆ ಎಂದವರು ಹೇಳಿದರು.
ಇದೆಲ್ಲಕ್ಕಿಂತಲೂ ಮುಂಚೆ ನಮ್ಮಲ್ಲಿರುವ ಗೊಂದಲಗಳಿಂದ ಹೊರ ಬರಬೇಕು. ಬಸವಣ್ಣನವರ ಹಿರಿಮೆ ಗರಿಮೆಗಳನ್ನು ತತ್ವಗಳನ್ನು ಒಪ್ಪಿಕೊಳ್ಳುವಂತಾಗಬೇಕು ಅದಕ್ಕೆ ಪೂರ್ವಾಗ್ರಹ ಪೀಡೆಯಿಂದ ಹೊರಬಂದು ಆಳವಾದ ಅಧ್ಯಯನವನ್ನು ಮಾಡಬೇಕು, ಬಸವಣ್ಣ ಧರ್ಮಗುರು ಯಾಕೆ,ವಚನ ಸಾಹಿತ್ಯ ಧರ್ಮ ಗ್ರಂಥ ಯಾಕೆ, ಎಂಬ ವಾಸ್ತವ ಅಂಶಗಳನ್ನು ತಿಳಿದುಕೊಳ್ಳಬೇಕು.
ಕಾನೂನಿನಿಂದ ಕ್ರಾಂತಿ ಸಾಧ್ಯವಿಲ್ಲ, ಆಚಾರ ಮತ್ತು ವಿಚಾರಗಳಿಂದ ಸಾಧ್ಯವಿದೆ, ನುಡಿದಂತೆ ನಡೆದಾಗ ಮಾತ್ರ ಕ್ರಾಂತಿ ಸಾಧ್ಯವಿದೆ, ಸಂವೇದನೆಯಿಂದ ಮುತ್ತು ಆಲೋಚನೆಗಳಲ್ಲಿ  ಬದಲಾವಣೆಯಾದಾಗ ಮಾತ್ರ ಕ್ರಾಂತಿ ಸಾಧ್ಯ, ಆ ಕ್ರಾಂತಿ ಬಸವಣ್ಣನವರಿಂದಾಯಿತು ಸಾಹಿತ್ಯದಲ್ಲಿ ದೊಡ್ಡ ಪಲ್ಲಟವನ್ನೇ ಮಾಡಿದರು, ಜನಸಾಮಾನ್ಯರ ಭಾಷೆಯಾದ ಕನ್ನಡದಲ್ಲಿ ಸಾಹಿತ್ಯ ರಚನೆ ಆರಂಭ, ಅಲ್ಲಿ ಹುಟ್ಟಿದ್ದೇ  ಶರಣ ಸಾಹಿತ್ಯ, ಪರ್ಯಾಯ ಸಂಸ್ಕೃತಿಯನ್ನು ಹುಟ್ಟು ಹಾಕಿದರು ಅದೇ ಶರಣ ಸಂಸ್ಕೃತಿ, ಬಸವಾದಿ ಪ್ರಮಥರ ಸ್ತುತಿಯೇ ಗುಗ್ಗುಳೋತ್ಸವ, ಕಾಯಕದಿಂದಲೇ ಮೋಕ್ಷವೆಂದು ತೋರಿಕೊಟ್ಟರು, ದಾಸೋಹ ಪರಂಪರೆಯ ಮೂಲ ಬಂದಿದ್ದೆ ಅಲ್ಲಿಂದ. ಹೀಗೆ ಜಗದ ದಾರ್ಶನಿಕರೆಲ್ಲರ ಗುಣಗಳನ್ನು ಬಸವಣ್ಣನವರಲ್ಲಿ ಕಾಣಬಹುದು ಎಂದು ಎಳೆ ಎಳೆಯಾಗಿ ವಿವಸಿದ ಅವರು ಇಷ್ಟಲಿಂಗ ಸಂಸ್ಕಾರ ದೀಕ್ಷಾ ಕಾರ್ಯಕ್ರಮಗಳು ಎಲ್ಲ ಬಸವಪರ ಸಂಘಟನೆಗಳಿಂದಾಗಬೇಕು  “ಶ್ರೀ ಗುರು ಬಸವ ಲಿಂಗಾಯ ನಮಃ” ಎಂಬುದು ಸ್ವಸ್ತಿ ಮಂತ್ರವಾಗಬೇಕು ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ  ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ಆಶೀರ್ವಚನ ನೀಡಿ ಹೆಣ್ಣು ಮಕ್ಕಳ ಸ್ವಾತಂತ್ರ್ಯಕ್ಕಾಗಿ ಬಸವಣ್ಣನವರು ತಮ್ಮ ಮನೆಯನ್ನು ತೊರೆದರು, ಅವರಿಂದಾಗಿಯೇ ಇಂದು ಹೆಣ್ಣು ಮಕ್ಕಳು ಮನೆಯಿಂದ ಹೊರ ಬಂದು ಸಮಾಜದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತಾಗಿದೆ. ಇಂದು ಸಂಸ್ಕೃತಿ ಮತ್ತು ಪರಂಪರೆ ಉಳಿದಿದ್ದರೆ ಅದು ಹೆಣ್ಣು ಮಕ್ಕಳಿಂದ ಮಾತ್ರ ಆದರೆ ಬದಲಾದ ವಾತಾವರಣದಲ್ಲಿ ಹೆಣ್ಣು ಮಕ್ಕಳು ಕೂಡ ಬಹಳಷ್ಟು ಬದಲಾಗುತ್ತಿದ್ದಾರೆ ಅದು ಮಾತ್ರ ಆಗಬಾರದು ಸಂಸ್ಕಾರ ಮತ್ತು ಸಂಸ್ಕೃತಿ ಶಾಶ್ವತವಾಗಿ ಉಳಿಯಬೇಕಾದರೆ ಅದು ಮಹಿಳೆಯರಿಂದ ಮಾತ್ರ ಸಾಧ್ಯ, ತಾಯಂದಿರಿಂದ ಮಾತ್ರ ಸಾಧ್ಯ ಅಷ್ಟಾವರಣ, ಪಂಚಾಚಾರ, ಷಟಸ್ಥಲ ಮತ್ತು ಇಷ್ಟಲಿಂಗ ಪರಂಪರೆಗಳನ್ನು ಉಳಿಸುವ ಮಹತ್ತರ ಜವಾಬ್ದಾರಿ ಮಹಿಳೆಯರ ಮೇಲಿದೆ ಎಂದವರು ನುಡಿದರು.
ಬಸವಣ್ಣನವರ ಸಪ್ತ ಸೂತ್ರಗಳಲ್ಲಿ ಒಂದನ್ನು ಸರಿಯಾಗಿ ಪಾಲಿಸಿದರೂ ಸಾಕು ಉನ್ನತ ಸ್ತರಕ್ಕೆ ಏರಲು ಸಾಧ್ಯ. ಲಂಡನ್ ನಲ್ಲಿ ಬಸವ ಮೂರ್ತಿಯ ಉದ್ಘಾಟನೆಗೆ ಪ್ರಧಾನಿಯಾಗಿ ಅಲ್ಲ ಬಸವ ಭಕ್ತನಾಗಿ ಬಂದಿದ್ದೇನೆ ಎಂದು ಮೋದಿ ಅವರು ಹೇಳಿದ್ದು ಬಸವಣ್ಣನವರ ಹಿರಿಮೆಯನ್ನು ತೋರುತ್ತದೆ ಎಂದರು.
ಪ್ರವಚನಕಾರ ಶ್ರೀ. ಚನ್ನವೀರ ಸ್ವಾಮಿ ಹಿರೇಮಠ ಪ್ರವಚನ ನೀಡಿದರು.ದಾನಮ್ಮ ದೇವಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ್ ಬೆಂಬಳಗಿ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಸಿ.ಎಂ. ಕಿತ್ತೂರು ವಂದಿಸಿದರು, ಶ್ರೀಮತಿ. ರೋಹಿಣಿ ಬೆಂಬಳಗಿ ಮತ್ತು ಶ್ರೀಮತಿ.ರಾಜಶ್ರೀ ದೇಯಣ್ಣವರ್ ಕಾರ್ಯಕ್ರಮ ನಿರ್ವಹಿಸಿದರು. ಟ್ರಸ್ಟ್ ಕಾರ್ಯದರ್ಶಿ ಮೃತ್ಯುಂಜಯ ಬೋಳಮಲ್ಲ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article