ಬಳ್ಳಾರಿ, ಜ.10: ಇಂಗ್ಲೀಷೂ ಸೇರಿದಂತೆ ಯಾವುದೇ ಭಾಷಾ ವಿಷಯ ಮತ್ತು ಇನ್ನಿತರ ಪಠ್ಯ ವಿಷಯಗಳನ್ನು ಕಲಿಯುವ ಬಗ್ಗೆ ಭಯವನ್ನು ಬಿಡಿ ಎಂದು ರಂಗ ಕಲಾವಿದ, ಸಾಹಿತಿ, ಆಪ್ತ ಸಮಾಲೋಚಕ ಯೋಗೇಶ್ ಮಾಸ್ಟರ್ ಹೇಳಿದರು.
ಬಳ್ಳಾರಿಯ 34ನೇ ವಾರ್ಡ್ ವ್ಯಾಪ್ತಿಯ ಭತ್ರಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಪಾಲಿಕೆಯ ಸದಸ್ಯೆ, ಮಾಜಿ ಮೇಯರ್ ಎಂ.ರಾಜೇಶ್ವರಿ ಅವರು ಏರ್ಪಡಿಸಿದ್ದ ಕಲಿಕೆಯ ಕುರಿತು ಜಾಗೃತಿ ಸಂವಾದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಯಾವುದೇ ವಿಷಯವನ್ನು ಕಲಿಯಲು ಸರಳ ಮಾರ್ಗ ಯಾವುದು ಎಂದು ಅರಿಯಿರಿ, ತಂತ್ರಗಳನ್ನು ಬಳಸಿ ವಿಷಯಗಳನ್ನು ತಿಳಿಯುವ ಮತ್ತು ನೆನಪಿನಲ್ಲಿಟ್ಟುಕೊಳ್ಳುವ ಪ್ರಯತ್ನ ಮಾಡಿ ಎಂದರು.
ಇದಕ್ಕೂ ಮುನ್ನ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರೊಂದಿಗೆ ಸಂವಾದ ನಡೆಸಿದ ಯೋಗೇಶ್ ಮಾಸ್ಟರ್ ಕಲಿಕೆಯಲ್ಲಿ ಹಿಂದುಳಿದ ಹಾಗೂ ಮುಂದುವರಿದ ಮಕ್ಕಳ ನಡುವೆ ಹೋಲಿಕೆ ಮಾಡಬಾರದು, ದಡ್ಡ ಎಂದು ಪಟ್ಟ ಕಟ್ಟಬಾರದು ಎಂದು ಕಿವಿ ಮಾತು ಹೇಳಿದರು.
ಯಾರಾದರೂ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿದ್ದರೆ ಅದಕ್ಕೆ ವಿದ್ಯಾರ್ಥಿಗಳು ನೇರ ಕಾರಣ ಅಲ್ಲ, ಅವರ ವಂಶವಾಹಿ, ಬೌದ್ಧಿಕ ಕ್ಷಮತೆ, ಪರಿಸರ, ಕುಟುಂಬದ ವಾತಾವರಣ ಕೂಡ ಕಾರಣ ಹೀಗಾಗಿ ಕಲಿಯಲು ಹಿಂದುಳಿದವರನ್ನು ಮುಂದೆ ತರಲು ವಿವಿಧ ತಂತ್ರ ಬಳಸಬೇಕು, ಅಂಥಹ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಕಾಣಬೇಕು ಎಂದರು.
ಈ ಸಂದರ್ಭ ಪಾಲಿಕೆಯ ಸದಸ್ಯೆ, ಮಾಜಿ ಮೇಯರ್ ಎಂ.ರಾಜೇಶ್ವರಿ ಅವರು ಯೋಗೇಶ್ ಮಾಸ್ಟರ್ ಅವರನ್ನು ಸನ್ಮಾನಿಸಿ, ಅಭಿನಂದಿಸಿದರು. ಉಪನ್ಯಾಸಕರ ಮಾರ್ಗದರ್ಶನಗಳನ್ನು ಪಾಲಿಸಿ, ಉತ್ತಮ ವಿದ್ಯಾರ್ಥಿಗಳಾಗುವಂತೆ ಕರೆ ನೀಡಿದರು.
ಈ ಸಂದರ್ಭ ಶಾಲೆಯ ಮುಖ್ಯೋಪಾಧ್ಯಾಯರಾದ ಶಾಂತಕುಮಾರಿ, ಶಿಕ್ಷಕರಾದ ಯು.ರಾಜೇಶ್ವರಿ, ಬಿ.ದೀಪಾ, ಸಿ.ದತ್ತೇಶ್ವರ, ಸಿ.ಮಂಜುಳಾ, ಉಷಾಶ್ರೀ, ಭವಾನಿ, ವರಲಕ್ಷ್ಮೀ ಸೇರಿದಂತೆ ಹಲವರು ಹಾಜರಿದ್ದರು.


