ಮಂಗಳೂರು, ಜುಲೈ 12: ಮಂಗಳೂರಿನಲ್ಲಿ ಡ್ರಗ್ಸ್ ಜಾಲದ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಬೀದರ್ ಮೂಲದ ವೈದ್ಯರೊಬ್ಬರನ್ನು ಬಂಧಿಸಿದ್ದಾರೆ. ವೈದ್ಯರ ಬಂಧನದ ಬೆನ್ನಲ್ಲೇ, ದಕ್ಷಿಣ ಕನ್ನಡ ಜಿಲ್ಲೆಯ ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದ ಅನೇಕ ಸ್ಫೋಟಕ ಮಾಹಿತಿಗಳು ಕೂಡ ಬೆಳಕಿಗೆ ಬಂದಿವೆ. ಬೀದರ್ ಮೂಲದ, ಪ್ರಸ್ತುತ ಬೆಂಗಳೂರಿನ ಕೋಡಿಪಾಳ್ಯ ನಿವಾಸಿಯಾಗಿರುವ ಪ್ರಜ್ವಲ್ ಪೀಣ್ಯಾಸ್ ಬಂಧಿತ ವೈದ್ಯ. ಪ್ರಜ್ವಲ್ ಪೀಣ್ಯಾಸ್ ಹಾಗೂ ಇತರ ಪೆಡ್ಲರ್ಗಳು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಡ್ರಗ್ಸ್ ಜಾಲದ ಬೆನ್ನುಬಿದ್ದ ಮಂಗಳೂರು ಪೊಲೀಸರಿಗೆ ಸ್ಫೋಟಕ ಮಾಹಿತಿ ದೊರೆತಿದೆ. ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಿಂದ ಮಂಗಳೂರಿಗೆ ಡ್ರಗ್ಸ್ ಪೂರೈಕೆಯಾಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ವಿದ್ಯಾರ್ಥಿಗಳನ್ನೇ ಗುರಿಯಾಗಿಸಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದುದು ಕೂಡ ಗೊತ್ತಾಗಿದೆ.
ಡ್ರಗ್ಸ್ ಜಾಲದ ಬೆನ್ನುಬಿದ್ದ ಮಂಗಳೂರು ಪೊಲೀಸರು 6 ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ವೇಳೆ, ವೈದ್ಯ ಪ್ರಜ್ವಲ್ ಪೀಣ್ಯಾಸ್ ಕಿಂಗ್ಪಿನ್ ಎಂಬುದು ಗೊತ್ತಾಗಿದೆ.