ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಅನುಷ್ಠಾನದಲ್ಲಿ ನಿರ್ಲಕ್ಷ್ಯ ಬೇಡ – ಯು. ನಿಸಾರ್ ಅಹ್ಮದ್

MK HasiruKranti
ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಅನುಷ್ಠಾನದಲ್ಲಿ ನಿರ್ಲಕ್ಷ್ಯ ಬೇಡ – ಯು. ನಿಸಾರ್ ಅಹ್ಮದ್
WhatsApp Group Join Now
Telegram Group Join Now
ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ

ಕೊಪ್ಪಳ ಏಪ್ರಿಲ್ 09, : ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಡಿ ಅಲ್ಪಸಂಖ್ಯಾತರ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಎಲ್ಲಾ ಇಲಾಖೆಗಳು ಹೆಚ್ಚಿನ ಆದ್ಯತೆ ನೀಡಬೇಕು. ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ನಿರ್ಲಕ್ಷ್ಯ ಬೇಡ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಯು. ನಾಸೀರ್ ಅಹ್ಮದ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುರುವಾರ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮವು ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಜೈನ್, ಕ್ರಿಶ್ಚಿಯನ್, ಸಿಖ್, ಪಾರ್ಸಿ ಹಾಗೂ ಬೌದ್ಧ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ರೂಪಿಸಲಾದ ಪ್ರಮುಖ ಯೋಜನೆಯಾಗಿದೆ. ಈ ಯೋಜನೆಗಳಡಿ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಉಚಿತ ಪರೀಕ್ಷಾ ಪೂರ್ವ ತರಬೇತಿ, ಸ್ವಯಂ ಉದ್ಯೋಗಕ್ಕಾಗಿ ಸಾಲ ಸೌಲಭ್ಯ ಸೇರಿದಂತೆ ವಿವಿಧ ಯೋಜನೆಗಳ ಲಾಭವನ್ನು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಆಯಾ ಇಲಾಖಾ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಡಿ ಕೊಪ್ಪಳ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಸಾಧಿಸಿರುವ ಪ್ರಗತಿ ಪರಿಶೀಲಿಸಿದ ಅಧ್ಯಕ್ಷರು ನಿಗದಿತ ಗುರಿಯಂತೆ ಪ್ರಗತಿ ಸಾಧನೆಗೆ ವಿಳಂಬವಾಗುತ್ತಿರುವ ಯೋಜನೆಗಳನ್ನು ಆದ್ಯತೆ ಮೇರೆಗೆ ತ್ವರಿತವಾಗಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿಶೇಷ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ನಿವೇಶನ, ಮನೆಗಳ ಹಂಚಿಕೆ, ಗಂಗಾ ಕಲ್ಯಾಣ, ಸ್ವಯಂ ಉದ್ಯೋಗ ಯೋಜನೆಗಳು ಸೇರಿದಂತೆ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಲು ಇಲಾಖಾ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಸಾಕ್ಷರತಾ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಜೊತೆ ಸಮನ್ವಯ ಸಭೆ ನಡೆಸಿ 6 ವರ್ಷದ ಮಕ್ಕಳ ಸಮಗ್ರ ಸಮೀಕ್ಷೆ ನಡೆಸಬೇಕು. ಶಾಲೆಯಲ್ಲಿರುವ 6 ವರ್ಷದ ಮಕ್ಕಳ ಸಂಖ್ಯೆ ಲಭ್ಯವಿದ್ದರೂ ಶಾಲೆಯಿಂದ ಅನೇಕ ಮಕ್ಕಳು ಹೊರಗುಳಿದಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ರಾಜ್ಯದಲ್ಲಿ ಆರು ವರ್ಷದ ಮಕ್ಕಳ ನಿಖರ ದತ್ತಾಂಶ ಸಂಗ್ರಹಣೆ ಇಲ್ಲದಿರುವ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಮಾಹಿತಿ ಸಂಗ್ರಹಣೆಗೆ ಪ್ರಯತ್ನ ನಡೆಯುತ್ತಿದೆ. 100 ಮಕ್ಕಳಲ್ಲಿ 6 ವರ್ಷದವರು ಇದ್ದರೆ ಅದರಲ್ಲಿ ಸುಮಾರು 80 ಮಕ್ಕಳು ಮಾತ್ರ ಶಾಲೆಗೆ ಸೇರಿರುವ ಸಾಧ್ಯತೆ ಇದೆ. ಆದರೆ ಶಾಲೆಯಲ್ಲಿ ಇಲ್ಲದ ಉಳಿದ ಮಕ್ಕಳ ನಿಖರ ಸಂಖ್ಯೆಯ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಸಾಕ್ಷರತಾ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಭೆ ನಡೆಸಿ ಅಗತ್ಯ ಕಾರ್ಯಯೋಜನೆ ರೂಪಿಸಿ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಯೋಜನೆಗಳ ಅನುಷ್ಠಾನ ಹಾಗೂ ಸರ್ಕಾರದ ಸೌಲಭ್ಯಗಳು ಅಲ್ಪಸಂಖ್ಯಾತರಿಗೆ ಸಮರ್ಪಕವಾಗಿ ತಲುಪುತ್ತಿರುವ ಬಗ್ಗೆ ಸುದೀರ್ಘ ಸಭೆ ನಡೆಸಿ ಸಂಬಂಧಿಸಿದ ಇಲಾಖೆಗಳೊಂದಿಗೆ ಪರಾಮರ್ಶೆ ಮಾಡಲಾಗಿದೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯ ಅಥವಾ ಅಪ್ರಸ್ತುತ ಸಂದೇಶಗಳನ್ನು, ದ್ವೇಷ ಭಾಷಣದಂತಹ ವಿಡಿಯೋಗಳ ಬಗ್ಗೆ ಗಮನ ಹರಿಸಿ. ಸಮಾಜದ ಶಾಂತಿ ಕದಡುವ ಯಾವುದೇ ಸನ್ನಿವೇಶಗಳಿಗೆ ಆಸ್ಪದ ಕೊಡಬೇಡಿ. ಜಿಲ್ಲೆಯಲ್ಲಿ ಎಲ್ಲ ಧರ್ಮಗಳ ನಡುವಿನ ಸಾಮರಸ್ಯ, ಕೋಮು ಗಲಭೆ ರಹಿತ ಹಬ್ಬಗಳ ಆಚರಣೆ ಹೆಮ್ಮೆಯ ವಿಷಯ. ಈ ನಿಟ್ಟಿನಲ್ಲಿ ಜಿಲ್ಲೆಯ ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದು ಹೀಗೆಯೇ ಮುಂದುವರೆಯಲಿ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಭವಿಷ್ಯದಲ್ಲಿ ಉತ್ತಮ ಉದ್ಯೋಗಾವಕಾಶವಿರುವ ವೃತ್ತಿ ಆಧಾರಿತ ತರಬೇತಿಗಳನ್ನು ಅರ್ಹರಿಗೆ ನೀಡಿ. ಸಾಗರದಾಚೆಗಿನ ಉದ್ಯೋಗವಕಾಶಗಳ ಬಗ್ಗೆ ಜಾಗೃತಿ ಮೂಡಿಸಿ, ನಿಮ್ಮಲ್ಲಿ ಆ ಸೌಲಭ್ಯವಿಲ್ಲದಿದ್ದಲ್ಲಿ, ಸೌಲಭ್ಯವಿರುವೆಡೆ ಕಳಿಸಿ ವೃತ್ತಿ ಕೌಶಲ್ಯ ತರಬೇತಿ ನೀಡಿ. ಅಲ್ಪಸಂಖ್ಯಾತರು ಮಾತ್ರವಲ್ಲದೆ ಎಲ್ಲ ವರ್ಗದ ಅರ್ಹರಿಗೂ ಉದ್ಯೋಗವಕಾಶಗಳನ್ನು ಒದಗಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಬೇಕು. ಸ್ವ ಉದ್ದಿಮೆ ಸ್ಥಾಪಿಸಲು ತರಬೇತಿಯೊಂದಿಗೆ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯವನ್ನೂ ಒದಗಿಸಬೇಕು ಎಂದು ಅವರು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿ ಮುಜಿಬುಲ್ಲಾ ಜಫಾರಿ, ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ದಿ, ಡಿಎಫ್‌ಒ ನಿರ್ಮಲಾ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ ಕೃಷ್ಣಮೂರ್ತಿ, ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ ಜಿಲ್ಲಾ ಸ್ಥಾಯಿ ಸಮಿತಿ ಸದಸ್ಯರಾದ ಪ್ರಶಾಂತ ದೇಸಾಯಿ, ಮೊಹ್ಮದ ನಜಿರುದ್ದೀನ ಮೂಲಿಮನಿ, ಮಹಬೂಬ ಪಾಷಾ ಮಾನ್ವಿ, ಎಂ.ಡಿ.ಸಿರಾಜ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಜ್ಮೀರ ಅಲಿ, ಡಿಎಚ್‌ಒ ಡಾ.ಲಿಂಗರಾಜು ಟಿ., ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article